ಉತ್ತರ ಕರ್ನಾಟಕ ಮಂದಿ ಸೇರಿ ಸಿನಿಮಾ ಮಾಡಿರುವುದು ಹೊಸದೇನಲ್ಲ. ಈಗಾಗಲೇ ಹಲವು ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ “2000′ ಎಂಬ ಸಿನಿಮಾವೂ ಸೇರಿದೆ. ಆದರೆ, ಇದು ಬೇರೆ ಸಾಲಿನಲ್ಲಿ ನಿಲ್ಲುವ ಚಿತ್ರ ಎಂಬುದು ನೆನಪಿರಲಿ. ಅಂದರೆ, ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ಮೊದಲ ಬಾರಿಗೆ ಪಕ್ಕಾ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಮಂಜು ನಂದನ್ ನಿರ್ದೇಶಕರಾಗುತ್ತಿದ್ದಾರೆ. ಮುಂಬೈನಲ್ಲಿ ನಿರ್ದೇಶನದ ತರಬೇತಿ ಪಡೆದ ಮಂಜು ನಂದನ್, ಕೆಲ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ಮೂಲತಃ ಉತ್ತರ ಕರ್ನಾಟಕದವರಾಗಿದ್ದರಿಂದ ಅಲ್ಲಿನ ಪ್ರತಿಭೆಗಳನ್ನೆಲ್ಲಾ ಸೇರಿಸಿ ಒಂದು ತಂಡ ಕಟ್ಟುವ ಆಸೆ ಅವರಲ್ಲಿತ್ತು. ಆ ಆಸೆ. “2000′ ಚಿತ್ರದ ಮೂಲಕ ಈಡೇರಿದೆ.
ಈ ಚಿತ್ರಕ್ಕೆ ತಿಲಕ್ ಹೀರೋ. ಅವರಿಗೆ ರಮಣೀತು ಚೌಧರಿ ನಾಯಕಿ. ಎಲ್ಲವೂ ಸರಿ, “2000′ ಕಥೆ ಏನು? ಈ ಪ್ರಶ್ನೆಗೆ ಉತ್ತರವಾಗುವ ಮಂಜು ನಂದನ್, “ಇದೊಂದು ವಾಸ್ತವತೆಯ ಚಿತ್ರಣ. ಕಾಲೇಜು ಓದುವ ನಾಯಕನಿಗೆ ಓದಿನ ಮೇಲೆ ಆಸಕ್ತಿಯೇ ಇರುವುದಿಲ್ಲ. ಸದಾ ಬಿಂದಾಸ್ ಆಗಿರುವಂತಹ, ಡ್ರಗ್ಸ್‌ಗೆ ಅಂಟಿಕೊಂಡಿರುವ ಹುಡುಗನ ಹಿಂದಿನ ಕಥೆ ಇಲ್ಲಿದೆ. ಒಟ್ಟಾರೆ, ಈಗಿನ ಯುವಕರು ಡ್ರಗ್ಸ್‌ಗೆ ಜೋತುಬಿದ್ದು, ಹೇಗೆಲ್ಲಾ ತಮ್ಮ ಲೈಫ್ ಹಾಳು ಮಾಡಿಕೊಳ್ಳುತ್ತಾರೆ ಎಂಬುದರ ಚಿತ್ರಣದ ಜೊತೆಗೊಂದು ವಿಶೇಷವಾದ ಸಂದೇಶವೂ ಇಲ್ಲಿದೆ. ನಾಯಕನ ಲೈಫ್ಗೊಬ್ಬ ಹುಡುಗಿ ಎಂಟ್ರಿಯಾದಾಗ, ಅವನ ಲೈಫ್ ಹೇಗೆ ಬದಲಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆಯಾದರೂ, ಚಿತ್ರದಲ್ಲಿ ಸುಪಾರಿ ಕಿಲ್ಲರ್‌ಗಳು ಬರುತ್ತಾರೆ, ಡ್ರಗ್ಸ್ ಮಾಫಿಯಾ ಕಾಣಿಸಿಕೊಳ್ಳುತ್ತೆ, ನಾಯಕಿ ಇನ್ನೆಲ್ಲೋ ಕಾಣೆಯಾಗುತ್ತಾಳೆ. ನಾಯಕ ಬೇರೆಯೆಲ್ಲೋ ಕಾಣ ಸಿಗುತ್ತಾನೆ, ಇನ್ನೊಂದು ಕಡೆ ಟಿಬೆಟಿಯನ್ನರ ಕಾಲೋನಿಯೊಳಗೆ ಕಥೆ ಸಾಗುತ್ತೆ. ಯಾಕೆ ಟಿಬೆಟಿಯನ್ನರ ಕಾಲೋನಿಯಲ್ಲಿ ಕಥೆ ಸಾಗುತ್ತೆ ಎಂಬುದು ಸಸ್ಪೆನ್ಸ್. ನಾಯಕನಿಲ್ಲಿ ಮೂರು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಇನ್ನೂ ಅನೇಕ ವಿಷಯಗಳು ಚಿತ್ರದಲ್ಲಿವೆ’ ಎಂದು ವಿವರ ಕೊಡುತ್ತಾರೆ ಮಂಜು ನಂದನ್.
ಈ ಚಿತ್ರವನ್ನು ನೌಶಾದ್ ಸೌದಾಗರ್ ಮತ್ತು ಜಯರಾಮ್ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಸೌತ್‌ಆಫ್ರಿಕಾದ ಪೌಲ್ ಎಂಬ ಯುವ ಪ್ರತಿಭೆ ಛಾಯಾಗ್ರಹಕರಾಗಿ ಎಂಟ್ರಿಯಾಗುತ್ತಿದ್ದಾರೆ. ಇನ್ನು, ಸೌಂಡ್ ಎಂಜಿನಿಯರ್ ಆಗಿದ್ದ ಪ್ರವೀಣ್ ಪ್ರಾನ್ಸಿಸ್ ಚಿತ್ರದ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಮತ್ತೂಂದು ವಿಶೇಷವೆಂದರೆ, ಶಂಕರ್‌ನಾಗ್ ಅವರನ್ನೂ ಕೂಡ ಇಲ್ಲಿ ಕಾಣಬಹುದು. ಅದು ಯಾಕೆ, ಹೇಗೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ತಾರಾ ಅವರ ಜೊತೆ ಮಾತುಕತೆ ನಡೆಸುತ್ತಿರುವ ನಿರ್ದೇಶಕರು, ರಾಜು ತಾಳಿಕೋಟೆ, ಬ್ಯಾಂಕ್ ಜನಾರ್ದನ್ ಸೇರಿದಂತೆ ಹಲವು ಕಲಾವಿದರನ್ನು ಆಯ್ಕೆ ಮಾಡಿ ಚಿತ್ರ ಮಾಡುವ ಉತ್ಸಾಹದಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮೇ ಅಂತ್ಯದಲ್ಲಿ ಚಿತ್ರಕ್ಕೆ ಚಾಲನೆ ದೊರೆಯಲಿದೆ.