Advertisement

2000 ನೋಟು ಗುಡ್‌ ಬೈ!? ಎಟಿಎಂನಲ್ಲಿ ಕಾಣದ “ದೊಡ್ಡ’ನೋಟು

09:59 AM Mar 03, 2020 | Sriram |

2000 ರೂ.ನ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವರೇ ಸ್ಪಷ್ಟಪಡಿಸಿದ್ದಾರೆ. ಆದರೂ, “ನೋಟಿನ ರದ್ದತಿ ಭೂತ’ ಏಕೆ ಕಾಡುತ್ತಿದೆ?

Advertisement

ಹತ್ತು ರೂ. ನಾಣ್ಯಗಳನ್ನು ಜನರು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿರುವಂತೆ, ಆ ಸಮಸ್ಯೆಗೆ ಪರಿಹಾರ ಮರೀಚಿಕೆ ಆಗುತ್ತಿರುವಂತೆ, ಈಗ ಧುತ್ತೆಂದು 2000 ರೂ. ನೋಟುಗಳೂ ಗೊಂದಲದಲ್ಲಿ ಸಿಲುಕಿವೆ. ಜನಸಾಮಾನ್ಯರು ಅತಂಕಪಡುತ್ತಿದ್ದಾರೆ. ವಾಸ್ತವ ಏನೆಂದರೆ, ಸರ್ಕಾರ ಅಥವಾ ರಿಸರ್ವ್‌ ಬ್ಯಾಂಕ್‌ ಈ ನೋಟುಗಳನ್ನು ರದ್ದುಪಡಿಸಿಲ್ಲ ಮತ್ತು ಅವುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿಲ್ಲ. ಮೊನ್ನೆಯಷ್ಟೇ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಈ ಮಾತು ಹೇಳಿದ್ದಾರೆ. ಅದರೆ, ಕೆಲವು ಬ್ಯಾಂಕುಗಳ ಇತ್ತೀಚೆಗಿನ ನಡೆ ಮತ್ತು ರಿಸರ್ವ್‌ ಬ್ಯಾಂಕ್‌ ಈ ನೊಟುಗಳನ್ನು ವರ್ಷದಿಂದ ಮುದ್ರಿಸುತ್ತಿಲ್ಲ ಎನ್ನುವ ವದಂತಿಗಳು ಜನರನ್ನು ಗೊಂದಲಕ್ಕೀಡುಮಾಡಿವೆ. ಮಾಹಿತಿ ಹಕ್ಕು ಅಡಿಯಲ್ಲಿ ರಿಸರ್ವ್‌ ಬ್ಯಾಂಕ್‌ ನೀಡಿದ ಮಾಹಿತಿ ಪ್ರಕಾರ, 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಕಾಕತಾಳೀಯ ಎನ್ನುವಂತೆ ಬ್ಯಾಂಕುಗಳು ತೆಗೆದುಕೊಳ್ಳುತ್ತಿರುವ ಕೆಲವು ಕ್ರಮಗಳು ಜನರಲ್ಲಿ ಗಾಬರಿ ಹುಟ್ಟಿಸುತ್ತಿವೆ.

ಕೆಲವು ಬ್ಯಾಂಕುಗಳು ಎಟಿಎಂನಲ್ಲಿ 2000 ರೂ.ನ ನೋಟುಗಳನ್ನು ವಿತರಿಸಲು ಇರುವ ಸೌಲಭ್ಯವನ್ನೇ ರದ್ದುಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಪರಿಣಾಮ, ಮುಂದಿನ ದಿನಗಳಲ್ಲಿ ಎಟಿಎಂಗಳಲ್ಲಿ, ಕೇವಲ 100, 200, 500 ರೂ. ನೋಟುಗಳು ಮಾತ್ರ ಲಭ್ಯವಾಗಲಿವೆ. ಇನ್ನುಮುಂದೆ ಎಟಿಎಂ ಯಂತ್ರಗಳಲ್ಲಿರುವ 4 ಬಾಕ್ಸ್‌ ಗಳಲ್ಲಿ 3ರಲ್ಲಿ 500 ರೂ. ನೋಟುಗಳನ್ನು ಮತ್ತು ಉಳಿದ ಒಂದರಲ್ಲಿ 200 ಮತ್ತು 100ರ ನೋಟುಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಆತಂಕ ಬೇಡ
ಇದು 2000 ರೂ. ನೋಟುಗಳ ಅಮಾನ್ಯಿàಕರಣವಲ್ಲ. 2016 ರ ನೋಟುಗಳ ರದ್ದತಿ ಸಂದರ್ಭ ಖಂಡಿತ ಮರುಕಳಿಸುತ್ತಿಲ್ಲ. ಬ್ಯಾಂಕುಗಳಲ್ಲಿ ಗ್ರಾಹಕರು ಹಣ ಜಮಾ ಮಾಡುವಾಗ ಈ ನೋಟುಗಳನ್ನು ಸ್ವೀಕರಿಸಲಾಗುತ್ತದೆ. ಅದರೆ, ಗ್ರಾಹಕರಿಗೆ ಹಣ ನೀಡುವಾಗ ಈ ನೋಟುಗಳ ಬದಲಾಗಿ 100, 200 500ರ ನೋಟುಗಳನ್ನು ನೀಡಲಾಗುತ್ತದೆ. ಬ್ಯಾಂಕುಗಳು ತಮ್ಮಲ್ಲಿ ಸಂಗ್ರಹವಾದ 2000 ರೂ. ಮುಖಬೆಲೆಯ ನೋಟುಗಳನ್ನು ರಿಸರ್ವ್‌ ಬ್ಯಾಂಕ್‌ಗೆ ಕಳಿಸುತ್ತವೆ. ಹೀಗೆ, ನೋಟುಗಳನ್ನು ರಿಸರ್ವ್‌ ಬ್ಯಾಂಕ್‌ಗೆ ಹಿಂತಿರುಗಿಸುವ ಪ್ರಕ್ರಿಯೆಗೆ ಒಂದು ವರ್ಷ ತಗುಲಬಹುದು ಎನ್ನುವ ಅಂದಾಜಿದೆ.

ಈ ನೋಟುಗಳು ಎಟಿಎಂಗಳಲ್ಲಿ ಬರದಿದ್ದರೂ, ಇದರ ಚಲಾವಣೆ ಸ್ಥಗಿತವಾಗಿಲ್ಲ. ಹಣಕಾಸು ಮಂತ್ರಾಲಯ ಈ ನಿಟ್ಟಿನಲ್ಲಿ ನೇರವಾಗಿ ನಿರ್ದೇಶನ ನೀಡದಿದ್ದರೂ, ಬ್ಯಾಂಕುಗಳು ತಮ್ಮದೇ ನಿರ್ಧಾರ ತೆಗೆದುಕೊಂಡಿವೆ ಎಂದು ಹೇಳಲಾಗುತ್ತಿದೆ.

Advertisement

ಇದಕ್ಕೆ ಕಾರಣವೇನು?
2016ರಲ್ಲಿ 17.74 ಲಕ್ಷ ಕೋಟಿ ಹಣ ಚಲಾವಣೆಯಲ್ಲಿದ್ದರೆ, 2019ರಲ್ಲಿ ಅದು 22.35 ಲಕ್ಷ ಕೋಟಿಗೆ ಏರಿತ್ತು. ಇದು 14.15% ಹೆಚ್ಚಳ.ಇದಕ್ಕೆ 2000 ರೂ. ಮುಖಬೆಲೆಯ ನೋಟುಗಳೇ ಕಾರಣ ಎಂಬುದು ಕೆಲವು ಅರ್ಥಿಕ ತಜ್ಞರ ಅಭಿಪ್ರಾಯ. ಈ ಚಲಾವಣೆಯನ್ನು ನಿಯಂತ್ರಣಗೊಳಿಸಲು 2000 ರೂ. ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗುತ್ತದೆ. ಬ್ಯಾಂಕುಗಳ ಪ್ರಕಾರ ಗ್ರಾಹಕರು ಎಟಿಎಂನಲ್ಲಿ 2000 ರೂ. ಪಡೆದುಕೊಂಡವರು, ಚಿಲ್ಲರೆಗಾಗಿ ಪುನಃ ಬ್ಯಾಂಕುಗಳಿಗೇ ಬರುತ್ತಿದ್ದಾರೆ. ಇದರಿಂದ ಗ್ರಾಹಕರು ಮತ್ತು ಬ್ಯಾಂಕುಗಳು ಇಬ್ಬರಿಗೂ ಅನನುಕೂಲ. ಮಾರುಕಟ್ಟೆಯಲ್ಲಿ ಸಣ್ಣ, ಸಣ್ಣ ಅಂಗಡಿಗಳಲ್ಲಿ 2000 ರೂ. ನೋಟಿಗೆ ಚಿಲ್ಲರೆ ದೊರಕುವುದು ಕಷ್ಟ ಮತ್ತು ಆ ನೋಟನ್ನು ಸ್ವೀಕರಿಸುವಾಗ ಅದನ್ನು ಹಿಂದೆ- ಮುಂದೆ ತಿರುಗಿಸಿ, ಆ ನೋಟಿನ ಸಾಚಾತನದ ಬಗೆಗೆ ಸಂದೇಹಿಸಿ, ಚಿಂತಿಸುವವರೇ ಹೆಚ್ಚು. ಎಚ್ಚರಿಕೆಯ ದೃಷ್ಟಿಯಲ್ಲಿ ಅದನ್ನು ತೆಗೆದುಕೊಳ್ಳದವರೂ ಇ¨ªಾರೆ. ಸಾಮಾನ್ಯ ಜನರಿಗೆ ಒಂದು ದಿನದ ಕೂಲಿಯೇ 500ರ ಹತ್ತಿರ ಇರುವಾಗ 2000 ರೂ. ನೋಟು ನಿಜವಾಗಿ ಒಂದು ರೀತಿಯ ಹೊರೆ ಎನ್ನಲೇಬೇಕು.

ಸರ್ಕಾರದ ಜಾಣ ನಡೆ
ಈ ನೋಟುಗಳು ಹಣ ಹೋರ್ಡಿಂಗ್‌ ಮಾಡುವವರಿಗೆ ತುಂಬಾ ಸಹಾಯಕ ಎನ್ನುವ ಮಾತೂ ಇದೆ. ಈ ನೋಟುಗಳನ್ನು ಹಿಂಪಡೆಯುಲು ಇದೂ ಒಂದು ಕಾರಣ ಇದ್ದಿರಬಹುದು. ಬ್ಯಾಂಕುಗಳಲ್ಲಿ ಲಕ್ಷಾಂತರ- ಕೋಟ್ಯಂತರ ವ್ಯವಹರಿಸುವವರಿಗೆ 2000 ರೂ. ನೋಟುಗಳು ತುಂಬಾ ಅನುಕೂಲ ನೀಡುತ್ತಿದ್ದು, ಇದು ಅವರಿಗಷ್ಟೇ ಸಹಾಯಕ ಎನ್ನುವ ಮಾತು ಕೇಳಿಬರುತ್ತಿದೆ. ನಗದು ವ್ಯವಹಾರ ಕಡಿಮೆಯಾಗಿ, “ಡಿಜಿಟಲ್‌ ಮೋಡ್‌’ ಬಳಸುವುದರಿಂದ ದೊಡ್ಡ ಮೌಲ್ಯದ ನೋಟುಗಳ ಅವಶ್ಯಕತೆ ಇಲ್ಲ ಎನ್ನಲಾಗುತ್ತಿದೆ. 2000ದ ನೋಟನ್ನು ಅಮಾನ್ಯಿàಕರಿಸಿದರೆ ಅಥವಾ ರದ್ದು ಮಾಡಿದರೆ, 2016ರಲ್ಲಿ ಉಂಟಾದಂತೆ ಗೊಂದಲವಾಗಬಹುದು ಎಂದು ಸರ್ಕಾರವು ಅತಿಜಾಣ್ಮೆಯಿಂದ ಹೆಜ್ಜೆ ಇಡುತ್ತಿದೆ ಎಂದು ಕೆಲವು ಬ್ಯಾಂಕರುಗಳು ಹೇಳುತ್ತಾರೆ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next