ಬ್ರಹ್ಮಾವರ : ಇಲ್ಲಿನ ಬೈಕಾಡಿ ಬಳಿ ರವಿವಾರ ಟೆಂಪೊ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ.
ಕೋಟೇಶ್ವರದಲ್ಲಿ ಕಾಂಕ್ರೀಟ್ ಕಾಮಗಾರಿ ಮುಗಿಸಿ ಉಡುಪಿಗೆ ವಾಪಸಾಗುತ್ತಿದ್ದಾಗ ಟೆಂಪೊದ ಚಕ್ರ ಸ್ಫೋಟಗೊಂಡು ಡಿವೈಡರ್ ಮೇಲೆ ಪಲ್ಟಿಯಾಗಿದೆ. ಟೆಂಪೊದಲ್ಲಿ ಮಹಿಳೆಯರು, ಮಕ್ಕಳು ಸೇರಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಜತೆಗೆ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರವನ್ನೂ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಸುಮಾರು 18 ಮಂದಿಯನ್ನು ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರಿಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಸ್ಥಳೀಯರು ಸಹಕರಿಸಿದರು.
ಇದನ್ನೂ ಓದಿ :ಬಂಟ್ವಾಳ : ದುಷ್ಕರ್ಮಿಗಳಿಂದ ಯುವಕನಿಗೆ ಚೂರಿ ಇರಿತ
ಅಪಘಾತ ನಡೆದ ಸ್ಥಳವು ರಾ.ಹೆ.ಯ ಬೀದಿ ದೀಪವಿಲ್ಲದೆ ಕತ್ತಲೆಯಲ್ಲಿ ಮುಳುಗಿತ್ತು. ಘಟನೆ ನಡೆದು 1 ಗಂಟೆ ಕಳೆದರೂ ಟೋಲ್ ಗುತ್ತಿಗೆ ಕಂಪೆನಿಯಿಂದ ವಾಹನ ತೆರವಿಗೆ ಯಾವುದೇ ಕ್ರಮ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು.