Advertisement

ಗ್ರಾಮ ಕರ್ನಾಟಕದಲ್ಲಿ 20 ಲಕ್ಷ ಮನೆ

08:15 AM Feb 17, 2018 | Team Udayavani |

ಗುಡಿಸಲು ಮುಕ್ತ ಕರ್ನಾಟಕ ಮಾಡುವ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 20 ಲಕ್ಷ ಮನೆ ನಿರ್ಮಿಸುವ ಭರವಸೆ ನೀಡಿದ್ದಾರೆ. ವಸತಿ ಇಲಾಖೆಗೆ 3,942 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಪ್ರಮುಖ ವಾಗಿ ಬೆಂಗಳೂರು ನಗರ ಪ್ರದೇಶದಕ್ಕೆ ಜಾರಿಗೆ ತಂದಿದ್ದ ಮುಖ್ಯ ಮಂತ್ರಿ ನಗರ ವಸತಿ ಯೋಜನೆಯನ್ನು ರಾಜ್ಯದ ಎಲ್ಲ ನಗರ ಗಳಿಗೂ ವಿಸ್ತರಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. 

Advertisement

ವಸತಿ ಯೋಜನೆಗಳ ಅನುಷ್ಠಾನಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2 ಸಾವಿರ ಎಕರೆ, ಉಳಿದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 500 ಎಕರೆ, ನಗರಸಭೆ,  ಪುರಸಭೆಗಳಲ್ಲಿ 250 ಎಕರೆ ಹಾಗೂ ಇತರೆ ಪಟ್ಟಣ ಪ್ರದೇಶಗಳಲ್ಲಿ 100 ಎಕರೆ ಸರ್ಕಾರಿ ಜಮೀನು ಮೀಸಲಿಡಲು ಸರ್ಕಾರ ಉದ್ದೇಶಿಸಿದೆ. 

ರಾಜ್ಯದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ವ್ಯವಹಾರ ವೃದ್ಧಿಗೆ ಪೂರಕವಾಗಿ ಮೂಲ ಸೌಕರ್ಯ ಕಲ್ಪಿಸಲು ಹೊಸ ಮೂಲಸೌಲಭ್ಯ ನೀತಿ ರೂಪಿಸುವುದಾಗಿ ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ನೊಂದೆಡೆ ನಿರಂತರವಾಗಿ ಹಿಗ್ಗುತ್ತಿರುವ ನಗರ, ಪಟ್ಟಣ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆ.

ತ್ಯಾಜ್ಯ ನೀರಿನ ಸಂಸ್ಕರಣೆ, ಮರುಬಳಕೆ, ನೀರಿನ ಸೋರಿಕೆ ಪ್ರಮಾಣ ಇಳಿಕೆ, ವಿದ್ಯುತ್‌ ಉಳಿತಾಯಕ್ಕಾಗಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬೀದಿದೀಪಗಳಿಗೆ ಎಲ್‌ಇಡಿ ಅಳವಡಿಕೆ ಇತರೆ ಕ್ರಮಗಳ ಮೂಲಕ ನಗರ, ಪಟ್ಟಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಒಂದಿಷ್ಟು ಕಾರ್ಯಕ್ರಮಗಳನ್ನು ಉಲ್ಲೇಖೀಸಿದ್ದಾರೆ. ಕೈಗಾರಿಕೆ ಮತ್ತು ವಾಣಿಜ್ಯ ವ್ಯವಹಾರ ಉತ್ತೇಜನಕ್ಕೆ ಸದ್ಯ ಜಾರಿಯಲ್ಲಿರುವ ಮೂಲಸೌಲಭ್ಯ ನೀತಿಯು ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಯೋಜನೆಗಳಿಗಷ್ಟೇ ಸೀಮಿತವಾಗಿದೆ. ಇದರಿಂದ ಹೆಚ್ಚಿನ ಪ್ರಯೋಜನವಾಗ ದಿರುವುದನ್ನು ಮನಗಂಡಿರುವ ಮುಖ್ಯಮಂತ್ರಿಗಳು, ಮೂಲಸೌಲಭ್ಯ ಅಭಿವೃದ್ಧಿಗೆ ಯೋಜನೆಗಳನ್ನು ವಿಶೇಷ ವಾಹಕ ಸಂಸ್ಥೆ ಹಾಗೂ ಜಂಟಿ ವಲಯ ಕಂಪನಿಗಳ ಮೂಲಕ ಜಾರಿಗೊಳಿಸುವ ಸಾಧ್ಯತೆಗಳನ್ನು ಒಳಗೊಂಡ ಹೊಸ ಮೂಲ ಸೌಕರ್ಯ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.

ಸರಕು ಸಾಗಣೆ ಮತ್ತು ಸಾರ್ವಜನಿಕರ ಪ್ರಯಾಣವನ್ನು ಹೆಚ್ಚು ಸಮರ್ಪಕ ಹಾಗೂ ತ್ವರಿತವಾಗಿಸಲು ಪೂರಕವಾಗಿ ರಸ್ತೆ ಸಾಂದ್ರತೆ ತಗ್ಗಿಸಲು ನಾನಾ ಕ್ರಮ ಕೈಗೊಳ್ಳಲು ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ. ಮುಖ್ಯವಾಗಿ “ರೋಲ್‌ ಆನ್‌ ಹಾಗೂ ರೋಲ್‌ ಆಫ್’ ಮಾದರಿ ಜಾರಿ, ಮಲ್ಟಿ ಮೋಡಲ್‌ ಲಾಜಿಸ್ಟಿಕ್‌ ಪಾರ್ಕ್‌ ಹಾಗೂ ಸಮುದ್ರ ವಿಮಾನ ಸೇವೆಯನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದಾಗಿ ವಾಗ್ಧಾನ ನೀಡಿದ್ದಾರೆ.

Advertisement

ಬೀದಿ ದೀಪಗಳಿಗೆ ಎಲ್‌ಇಡಿ 
ರಾಜ್ಯದ ಎಲ್ಲ ಸ್ಮಾರ್ಟ್‌ಸಿಟಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬೀದಿದೀಪಗಳಿಗೆ ಸಾಂಪ್ರದಾಯಿಕ ದೀಪದ ಬದಲಿಗೆ ಕೇಂದ್ರಿಕೃತ ನಿಯಂತ್ರಣ ಮತ್ತು ಉಸ್ತುವಾರಿ ವ್ಯವಸ್ಥೆ ಹೊಂದಿದ ಎಲ್‌ಇಡಿ ದೀಪ ಅಳವಡಿಸುವುದಾಗಿ ಪ್ರಕಟಿಸಿರುವ ಮುಖ್ಯಮಂತ್ರಿಗಳು, ವಿದ್ಯುತ್‌ ಉಳಿತಾಯಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು ಮತ್ತು ನಗರ ಸಭೆ ವ್ಯಾಪ್ತಿಗಳಲ್ಲಿ ಜಾರಿಗೊಳಿಸುವುದು. ಎರಡನೇ ಹಂತದಲ್ಲಿ ಎಲ್ಲ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನದ ಮೂಲಕ ವಿದ್ಯುತ್‌ ಸದ್ಬಳಕೆಗೆ ಒತ್ತು ನೀಡುವುದಾಗಿ ಉಲ್ಲೇಖೀಸಿದ್ದಾರೆ.

ತ್ಯಾಜ್ಯನೀರು ಮರುಬಳಕೆ 
ನೀರಿನ ಅಭಾವ ಹೆಚ್ಚಾಗುತ್ತಿರುವ ಬೆನ್ನಲ್ಲೇ ತ್ಯಾಜ್ಯ ನೀರು ಸಂಸ್ಕರಿಸಿ ಬಳಸುವ ವ್ಯವಸ್ಥೆ ಜಾರಿ ಬಗ್ಗೆ ಪ್ರಸ್ತಾಪಿಸಲಾಗಿದೆ.  ಬೆಂಗಳೂರು ಸೇರಿ ಎಲ್ಲ ನಗರಗಳಲ್ಲಿ ಕೃಷಿ, ಕೈಗಾರಿಕೆ ಇತರೆ ಉದ್ದೇಶಗಳಿಗೆ ಹೆಚ್ಚುವರಿ ನೀರಿನ ಬೇಡಿಕೆ ಪೂರೈಸಲು, ಥರ್ಮಲ್‌ ಘಟಕ ಸೇರಿದಂತೆ ನಗರ ಪ್ರದೇಶದ ತ್ಯಾಜ್ಯ ನೀರಿನ ಮರು ಬಳಕೆಗಾಗಿ ಸಂಸ್ಕರಣೆ ಮಾಡಲು ನೀತಿ ರೂಪಿಸಲಾಗಿದೆ.  ಪ್ರಾಯೋಗಿಕವಾಗಿ 10 ನಗರಗಳಲ್ಲಿ ತ್ಯಾಜ್ಯನೀರಿನ ಸಂಸ್ಕರಣೆ ಮರು ಬಳಕೆ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.  ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೆಕ್ಕಕ್ಕೆ ಸಿಗದ ನೀರು ಸೋರಿಕೆ ಪ್ರಮಾಣ ಇಳಿಕೆಗೆ ಪೌರಾಡಳಿತ ನಿರ್ದೇಶನಾಲಯದ ಹಂತದಲ್ಲೇ ಪ್ರತ್ಯೇಕ ಉಸ್ತುವಾರಿ ಕೋಶ ಸ್ಥಾಪಿಸುವುದಾಗಿ ಉಲ್ಲೇಖೀಸಿದ್ದಾರೆ. 

ಅಂತರ್ಜಾಲದಲ್ಲಿ ಮಾಹಿತಿ
ನೀರು ಸರಬರಾಜು ಯೋಜನೆಗಳ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ 10 ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೊಳಿಸಲು 25 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನೀರು ಸರಬರಾಜು ಯೋಜನೆಗಳ ಮಾಹಿತಿ, ಪ್ರಮಾಣಿತ ಸೇವಾ ಮಟ್ಟದ ಸೂಚಕ ಒಳಗೊಂಡಂತೆ ಮಾಹಿತಿ ತಂತ್ರಜ್ಞಾನ ಉಪಕರಣ ಬಳಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಅಂತರ್ಜಾಲದಲ್ಲೇ ಸಮಗ್ರ ಮಾಹಿತಿ ಪಡೆಯಲು ವ್ಯವಸ್ಥೆ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ. ಹಂತ ಹಂತವಾಗಿ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹಂತ ಹಂತವಾಗಿ ವಿಸ್ತರಿಸುವ ಉಲ್ಲೇಖವಿದೆ.

Advertisement

Udayavani is now on Telegram. Click here to join our channel and stay updated with the latest news.

Next