Advertisement

ನಿದ್ದೆಗೆಡಿಸಿದ ಸೋಂಕಿನ ಮೂಲ

03:08 PM Apr 14, 2020 | mahesh |

ಮೈಸೂರು: ಜಿಲ್ಲೆಯ ಜನತೆ ನಿದ್ದೆಗೆಡಿಸಿರುವ ನಂಜನಗೂಡು ಜ್ಯುಬಿಲಿಯಂಟ್‌ ಔಷಧ ಉತ್ಪಾದನಾ ಕಾರ್ಖಾನೆ ನೌಕರರಲ್ಲಿ ಕೊರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದು 20 ದಿನಗಳಾದರೂ ಈವರೆಗೂ ಸೋಂಕಿನ ಮೂಲ ಪತ್ತೆಯಾಗಿಲ್ಲ. ನಂಜನಗೂಡಿನ ಜ್ಯುಬಿಲಿಯಂಟ್‌ ಫಾರ್ಮಾ ಕಂಪೆನಿಯ ನೌಕರರು ಹಾಗೂ ಅವರ ಒಡನಾಟದಲ್ಲಿದ್ದವರು ಸೇರಿದಂತೆ ಬರೋಬ್ಬರಿ 37 ಮಂದಿಯಲ್ಲಿ ಸೋಂಕು ದೃಢವಾಗಿ, ಇಡೀ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಈ ಸೋಂಕು ಮೈಸೂರು ಜಿಲ್ಲೆ ಪ್ರವೇಶಿಸಿ ಕಾರ್ಖಾನೆಯಲ್ಲಿ ಹರಡಿದೆ ಎಂಬುದು ಇಂದಿಗೂ ಚಿದಂಬರ ರಹಸ್ಯವಾಗಿ ಉಳಿದಿದೆ.

Advertisement

ಜ್ಯುಬಿಲಿಯಂಟ್‌ನ ನೌಕರ (ರೋಗಿಯ ಸಂಖ್ಯೆ 52)ನಿಗೆ ಮೊದಲು ಸೋಂಕು ಇರುವುದು ದೃಢಪಟ್ಟಿತು. ಇದು ಜಿಲ್ಲೆಯ ಮೂರನೇ ಪ್ರಕರಣವಾಗಿದೆ. ಈತ
ವಿದೇಶಕ್ಕೆ ತೆರಳದಿದ್ದರೂ, ವಿದೇಶದಿಂದ ಬಂದವರ ಸಂಪರ್ಕದಲ್ಲಿ ಇರದಿದ್ದರೂ ಕೊರೊನಾ ಹೇಗೆ ಹರಡಿತು ಎಂಬುದು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ
ನಿದ್ದೆಗೆಡಿಸಿದೆ. ಮೂಲವನ್ನು ಮರೆಮಾಚುವ ಉದ್ದೇಶ ಪೂರ್ವಕ ಪ್ರಯತ್ನ ನಡೆಯುತ್ತಿದೆಯೇ ಅಥವಾ ಪೊಲಿಸರಿಗೆ ಪತ್ತೆ ಹಚ್ಚಲಾಗದಷ್ಟು ನಿಗೂಢವಾಗಿರುವುದೇ
ಎಂಬ ಅನುಮಾನ ಮೂಡಿದೆ.

2003ರಿಂದ ಕಾರ್ಯಾರಂಭ: ನಂಜನಗೂಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಔಷಧ ಕಂಪನಿಯೊಂದನ್ನು 2003ರಲ್ಲಿ ಖರೀದಿಸಿದ ಜ್ಯುಬಿಲಿಯಂಟ್‌ ಫಾರ್ಮಾ
ಕಂಪನಿ, ತನ್ನ ಹೊಸ ಘಟಕವನ್ನು ನಂಜನಗೂಡು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ 2003ರಿಂದ ಕಾರ್ಯಾರಂಭ ಮಾಡಿದ ಈ ಸಂಸ್ಥೆ ಔಷಧ ಮತ್ತು
ಇಂಜೆಕ್ಷನ್‌ ಉತ್ಪಾದನೆ ಮಾಡುತ್ತಿದ್ದು, ಉತ್ತಮ ಹೆಸರು ಮಾಡಿದೆ. ಸ್ಥಳೀಯರಿಗೆ ಉದ್ಯೋಗ ನೀಡಿ, ಜನರ ಗೌರವಕ್ಕೂ ಪಾತ್ರವಾಗಿದೆ. ಆದರೆ, ಕೊರೊನಾ
ಕಾರ್ಖಾನೆಯೊಳಗೆ ಹೇಗೆ ನುಸುಳಿತು ಎಂಬುದೇ ಸಾಮಾನ್ಯರು, ಪೊಲೀಸರು ಮತ್ತು ಅಧಿಕಾರಿಗಳನ್ನು ಕಾಡುತ್ತಿದೆ. ಈ ಕಾರ್ಖಾನೆಗೆ ಮುಖ್ಯ ಸಂಸ್ಥೆಯಿಂದ ಅಥವಾ ಇತರೆ ಶಾಖೆಯಿಂದ ಯಾರಾದರು ಬಂದಿದ್ದರಾ? ಇಲ್ಲೇ  ಸಿಬ್ಬಂದಿ ಹೊರಗಿನ ಸಂಪರ್ಕದಿಂದ ಕಂಪೆನಿ ಒಳಗೆಹರಡಿತೆ? ಎನ್ನುವ ಬಗ್ಗೆ ಪೊಲಿಸರು ತನಿಖೆ ನಡೆಸಿದ್ದಾರೆ. ಆದರೂ, ಇಲ್ಲಿಯವರೆಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಹೊರಗಿನವರಿಂದ ಹರಡಿತೆ?: ತಿಂಗಳ ಹಿಂದೆ ಕಾರ್ಖಾನೆಗೆ ಆಡಿಟ್‌ಗಾಗಿ ದೆಹಲಿಯಿಂದ ಮುಖ್ಯಸ್ಥರು ಬಂದಿದ್ದರು ಎಂಬ ಮಾಹಿತಿ ಜೊತೆಗೆ ವಿವಿಧ
ಉದ್ದೇಶಗಳಿಗಾಗಿ ಕೊರಿಯಾ, ಆಸ್ಟ್ರೇಲಿಯಾದಿಂದ ಬಂದಿದ್ದ ವ್ಯಕ್ತಿಗಳಿಂದ ಸೋಂಕು ಹರಡಿದೆ ಎಂಬ ಅನುಮಾನ ಕೇಳಿಬರುತ್ತಿದೆ.

ಇನ್ನೂ ಬಾರದ ಕಂಟೈನರ್‌ ವರದಿ: ಕಂಪೆನಿ ನೌಕರರಿಗೆ ಚೀನಾದಿಂದ ಬಂದ ಕಂಟೈನರ್‌ನಿಂದ ಕೊರೊನಾ ಹರಡಿದೆ ಎಂಬ ಮಾತು ಕೇಳಿಬಂದ ಹಿನ್ನೆಲೆ ತನಿಖೆ
ನಡೆಸುತ್ತಿದ್ದ ಪೊಲೀಸರು ಕಂಟೈನರ್‌ನ್ನು ವಶಕ್ಕೆ ಪಡೆದು ಪುಣೆಯ ಪ್ರಯೋಗಾಲಯಕ್ಕೆ ರವಾನಿಸಿದೆ. ಆದರೆ, ಈವರೆಗೂ ವರದಿ ಜಿಲ್ಲಾಡಳಿತದ ಕೈಸೇರಿಲ್ಲ.

Advertisement

ಸಮಗ್ರ ತನಿಖೆ ನಡೆಯಲಿ
ಕಾರ್ಖಾನೆ ನೌಕರರಿಗೆ ಕೊರೊನಾ ಹೇಗೆ ಹರಡಿತು ಎಂಬ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಯಬೇಕು. ಜ್ಯುಬಿಲಿಯಂಟ್‌ ಕಾರ್ಖಾನೆ ಇದೀಗ ಲಾಕ್‌ಔಟ್‌
ಆಗಿದ್ದು, ಅದರ ಪುನಾರಂಭಕ್ಕೆ ನನ್ನ ವಿರೋಧವಿಲ್ಲ. ಜೊತೆಗೆ ಅಲ್ಲಿನ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವುದಕ್ಕೆ ನನಗೆ ಇಷ್ಟವಿಲ್ಲ. ಲಾಕ್‌ಡೌನ್‌
ಅವಧಿ ಮುಗಿಯುವುದರೊಳಗೆ ತನಿಖೆ ಮಾಡಿ ಮುಗಿಸಬೇಕು. ಜ್ಯುಬಿಲಿಯಂಟ್‌ ಕಾರ್ಖಾನೆಯಲ್ಲಿ ಈವರೆಗೆ ಆಗಿರುವ ಬೆಳವಣಿಗೆಗಳು ನನಗೆ
ಸಮಾಧಾನ ತಂದಿಲ್ಲ. ಕನಿಷ್ಠ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಂಜನಗೂಡು ಶಾಸಕ ಹರ್ಷವರ್ಧನ್‌ ತಿಳಿಸಿದ್ದಾರೆ.

● ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next