Advertisement

ರಿಂಗ್‌ರೋಡ್‌ ಅಭಿವೃದ್ಧಿಗೆ 20 ಕೋ.ರೂ.

08:20 PM Sep 30, 2021 | Team Udayavani |

ಕುಂದಾಪುರ:  ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್‌ ರೋಡ್‌ ಅಭಿವೃದ್ಧಿಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನವಿಯಂತೆ 20 ಕೋ.ರೂ. ಮಂಜೂರಾಗಿದೆ.

Advertisement

ಬಹೂಪಯೋಗಿ:

ಕುಂದಾಪುರ ಪುರಸಭೆ ವ್ಯಾಪ್ತಿಯ ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್‌ ರೋಡ್‌ ಕಾಮಗಾರಿಯನ್ನು 20 ಕೋ.ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿಯವರು ಅನುಮೋದಿಸಿದ್ದಾರೆ. ಈ ಬಗ್ಗೆ ಆಡಳಿತ ಇಲಾಖೆಗೆ ತಿಳಿಸಲಾಗಿದೆ. ಇನ್ನು ಟೆಂಡರ್‌ ಪ್ರಕ್ರಿಯೆ ನಡೆಯಬೇಕಿದೆ. ಇದು ಸ್ಥಳೀಯರ ಅನೇಕ ವರ್ಷಗಳ ಬೇಡಿಕೆಯಾಗಿದೆ. ರಿಂಗ್‌ರೋಡ್‌ ನಿರ್ಮಾಣವಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.   ನಗರದೊಳಗೆ ಪ್ರವೇಶ ಪಡೆಯದೆ ಕೋಡಿ ಮೊದಲಾದ ಭಾಗಗಳಿಗೆ, ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್‌ ರೋಡ್‌ ಮೂಲಕ ಹೋಗಲು ಸಾಧ್ಯವಿದೆ. ಆದ್ದರಿಂದ ರಿಂಗ್‌ರೋಡ್‌ ನಿರ್ಮಾಣದ ಅವಶ್ಯವನ್ನು ಶಾಸಕರು ಅಂದೇ ಮನಗಂಡಿದ್ದರು. ಆದರೆ ನಾನಾ ಕಾರಣಗಳಿಂದ ಅನೇಕ ಬಾರಿ ಪ್ರಸ್ತಾವ ಸಲ್ಲಿಸಿದ್ದರೂ ಮಂಜೂರಾತಿ ವಿಳಂಬವಾಗುತ್ತಿತ್ತು.

ಗೊಂದಲ:

ಈ ಮಧ್ಯೆ ರಿಂಗ್‌ ರೋಡ್‌ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾವ ಇಲ್ಲ ಎಂದು ಈಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸರಕಾರವೇ ಉತ್ತರಿಸಿ ಗೊಂದಲ ಉಂಟು ಮಾಡಿದ್ದೂ ಇದೆ. ವಿಧಾನಪರಿಷತ್‌ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಕೇಳಿದ ಚುಕ್ಕಿ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ರಿಂಗ್‌ ರೋಡ್‌ ನಿರ್ಮಾಣಕ್ಕೆ ಯಾವುದೇ ಪ್ರಸ್ತಾವನೆ ಇರುವುದಿಲ್ಲ ಎಂದು ಹೇಳಿದ್ದರು. ಈ ಉತ್ತರದಿಂದ ನಗರದ ಜನತೆಗೆ ಸಹಜವಾಗಿ ಅಸಮಾಧಾನವಾಗಿತ್ತು.

Advertisement

ಮಂಜೂರು:

ಇದೀಗ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮುಖ್ಯಮಂತ್ರಿಗಳ ಮೂಲಕ ಅನುದಾನ ಮಂಜೂರು ಮಾಡಿಸಿದ್ದಾರೆ. 25 ಕೋ.ರೂ. ಬೇಡಿಕೆ ಇಡಲಾಗಿತ್ತು. ಅಂತೆಯೇ ಅಂದಾಜು ಪಟ್ಟಿಯೂ ತಯಾರಾಗಿತ್ತು. ಆದರೆ ಅಂತಿಮವಾಗಿ ಹಣಕಾಸು ಇಲಾಖೆ 20 ಕೋ.ರೂ. ಮಂಜೂರಾತಿ ನೀಡಿದೆ ಎನ್ನುತ್ತಾರೆ ಶಾಸಕರು.

ನಿರ್ವಹಣೆ ಇಲ್ಲ:

ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಂಗ್‌ರೋಡ್‌ ಅನಂತರದ ದಿನಗಳಲ್ಲಿ ನಿರ್ವಹಣೆ  ಕಾಣದೆ ವರ್ಷಗಳೇ ಸಂದುಹೋಗಿವೆ. ಮಳೆಯ ಅಬ್ಬರಕ್ಕೆ ರಿಂಗ್‌ರೋಡ್‌ನ‌ಲ್ಲಿ  ಬೃಹತ್‌ ಗುಂಡಿಗಳು ಸೃಷ್ಟಿಯಾಗಿ ವಾಹನ ಓಡಾಟ ದುಸ್ತರವೆನಿಸಿದೆ. ಮೀನುಗಾರಿಕೆ ವಲಯ ಎಂದು ಗುರುತಿಸಿಕೊಂಡಿರುವ ಖಾರ್ವಿಕೇರಿ, ಪಂಚಗಂಗಾವಳಿ, ಮದ್ದುಗುಡ್ಡೆ ಪ್ರದೇಶದಲ್ಲಿ ರಿಂಗ್‌ರೋಡ್‌ ಹಾದು ಹೋಗಿದೆ. ಈ ಎರಡು ಪ್ರದೇಶಗಳು ಅತ್ಯಂತ ಜನಸಂದಣಿಯಿಂದ ಕೂಡಿವೆ. ಸಹಸ್ರಾರು ಮನೆಗಳು ಇಲ್ಲಿವೆ. ಮುಖ್ಯವಾಗಿ ನದಿಪಾತ್ರದ ಇಲ್ಲಿಯ ಜನರು ಹೆಚ್ಚಾಗಿ ಮೀನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆಶಾದಾಯಕ ಇನ್ನು:

ರಿಂಗ್‌ ರೋಡ್‌ ಸಾಕಾರಗೊಂಡು 15 ವರ್ಷ ಸಂದರೂ ಇನ್ನೂ ಪೂರ್ಣಪ್ರಮಾಣದಲ್ಲಿ ಡಾಮರು ಕಾಮಗಾರಿ  ನಡೆದಿಲ್ಲ. ಹಲವೆಡೆ ನದಿ ದಂಡೆಗೆ ರಿಂಗ್‌ ರೋಡ್‌ಗೆಂದು ಕಟ್ಟಿದ ರಿವಿಟ್‌ಮೆಂಟ್‌ ಕುಸಿದಿದೆ. ಸಂಜೆ ವಿಹಾರಿಗಳು, ಪ್ರವಾಸಿಗರನ್ನು ಬರ ಸೆಳೆಯುವ ರಿಂಗ್‌ರೋಡ್‌ನ‌ ಉದ್ದಕ್ಕೂ ಕೊಳಚೆ ಕಣ್ಣಿಗೆ ಕಟ್ಟುತ್ತಿದೆ. ಸ್ಥಳೀಯಾಡಳಿತ ರಿಂಗ್‌ರೋಡ್‌ ನಿರ್ವಹಣೆಗೆ ಅನುದಾನ ತರುವಲ್ಲಿ  ಸೋತಿದೆ  ಎಂಬ ಆರೋಪ ಕೇಳಿಬಂದಿದೆ. ನದಿ ಪಾತ್ರದ ಜನರ ಸಂಪರ್ಕಕ್ಕೆ ಹಾದಿ ಇದಾಗಿದ್ದರೂ ಅಭಿವೃದ್ಧಿ ನನೆಗುದಿಗೆ ಬಿದ್ದ ಬಗ್ಗೆ ಆಕ್ರೋಶ ಇತ್ತು. ಈಗ ಶಾಸಕರ ಪ್ರಯತ್ನದಿಂದ ಪುರಸಭೆ ಮೇಲಿನ ಅಪವಾದ ದೂರವಾಗಿದೆ. ಮುಂದಿನ ದಿನಗಳು ಆಶಾದಾಯಕವಾಗಿದೆ.

ರಿಂಗ್‌ರೋಡ್‌ :

ಕುಂದಾಪುರ ನಗರವನ್ನು ಸುತ್ತುವರಿದಿರುವ ಮಹತ್ವಾಕಾಂಕ್ಷೆಯ ರಿಂಗ್‌ರೋಡ್‌ ನಾಗರಿಕರ ಪಾಲಿಗೆ ದುರ್ಲಭ ಎಂಬಂತೆ ಭಾಸವಾಗುತ್ತಿತ್ತು. 2006-07ನೇ ಸಾಲಿನಲ್ಲಿ  ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ ಸಾಕಾರಗೊಂಡ ಈ ಮಹತ್ವಾ ಕಾಂಕ್ಷೆಯ ಯೋಜನೆ ನಿರ್ವಹಣೆ ಇಲ್ಲದೆ ಸೊರಗುತ್ತಿತ್ತು. ಕುಂದಾಪುರದ ಸಂಗಂನಿಂದ ಮೊದಲ್ಗೊಂಡು ಪಂಚ ಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್‌ ರೋಡ್‌ ಚರ್ಚ್‌ ರಸ್ತೆಯನ್ನು ಸಂಧಿಸುತ್ತದೆ. ಅಲ್ಲಿಂದ ಕುಂದಾಪುರ ನಗರವನ್ನು ಹತ್ತಿರದಿಂದ ಸಂಧಿಸಬಹುದಾಗಿದೆ.

ರಿಂಗ್‌ರೋಡ್‌ ಅಭಿವೃದ್ಧಿಗೆ ಅನುದಾನ ಬೇಕೆಂದು ಅನೇಕ ವರ್ಷಗಳ ಬೇಡಿಕೆಯಾಗಿದ್ದು ಶಾಸಕರ ಸತತ ಪ್ರಯತ್ನದಿಂದ ದೊಡ್ಡ ಮೊತ್ತ ಮಂಜೂರಾಗಿದೆ. ಪುರಸಭೆ ಅಭಿವೃದ್ಧಿಗೆ ಇನ್ನಷ್ಟು ಅನುದಾನ ತರಿಸುವ ಭರವಸೆ ಅವರಿಂದ ದೊರೆತಿದೆ. ಇದರಿಂದ ನಗರದ ಬೆಳವಣಿಗೆಗೆ ಸಹಕಾರಿಯಾಗಲಿದೆ. -ವೀಣಾ ಭಾಸ್ಕರ ಮೆಂಡನ್‌ ಅಧ್ಯಕ್ಷರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next