Advertisement

ಅಧಿಕ ಬಡ್ಡಿಯ ಆಸೆ: 20 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ವಂಚನೆ; ಆರೋಪಿ ಬಂಧನ

09:36 PM Oct 15, 2020 | mahesh |

ಮಂಡ್ಯ: ಐಷಾರಾಮಿ ಜೀವನ ನಡೆಸಲು ಪ್ಲ್ಯಾನ್‌ ಮಾಡಿದ್ದ ಅಸಾಮಿಯೊಬ್ಬ ಅಧಿಕ ಬಡ್ಡಿಯ ಆಸೆ ತೋರಿಸಿ ಮಹಿಳೆಯರಿಂದ ಸುಮಾರು 20 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಆರೋಪಿಯನ್ನು ಮಂಡ್ಯ ನಗರ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ವಂಚನೆಗೊಳಗಾದ 36 ಮಹಿಳೆಯರ ಪಟ್ಟಿ ಪೊಲೀಸರಿಗೆ ಲಭ್ಯವಾಗಿದೆ.

Advertisement

ನಗರದ ಗುತ್ತಲು ರಸ್ತೆಯ ಬಸವನಗುಡಿ ಬಡಾವಣೆಯ ಸೋಮಶೇಖರ್‌(30) ಬಂಧಿತ. ಈತ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ಮಂಗಳಮುಖೀ ಸೇರಿದಂತೆ ಮಹಿಳೆಯರಿಂದ 5 ಕೆ.ಜಿ.ಗೂ ಹೆಚ್ಚು ಚಿನ್ನಾಭರಣ, ಲಕ್ಷಾಂತರ ರೂ. ನಗದು ಪಡೆದು ವಂಚಿಸಿದ್ದಾನೆ. ಈ ಸಂಬಂಧ ಮೋಸ ಹೋಗಿರುವವರ ಹೆಸರು ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

36 ಮಹಿಳೆಯರ ಮಾಹಿತಿ ಲಭ್ಯ:
ಸದ್ಯ ಪೊಲೀಸರಿಗೆ ಸುಮಾರು 36 ಮಹಿಳೆಯರು ಮೋಸ ಹೋಗಿರುವವರ ಮಾಹಿತಿ ಲಭ್ಯವಾಗಿದ್ದು, ಅವರ ವಿಳಾಸ ಕಲೆ ಹಾಕಲು ತನಿಖೆ ಕೈಗೊಂಡಿದ್ದಾರೆ. ಅದರ ಆಧಾರದ ಮೇಲೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ರಕ್ಷಣೆಗಾಗಿ ಪೊಲೀಸರಿಗೆ ಪತ್ರ:
ಚಿನ್ನಾಭರಣ, ನಗದು ಪಡೆದು ಹಲವು ತಿಂಗಳು ಕಾಲ ಕಳೆದಿದ್ದಾನೆ. ಆದರೆ, ಆಗಸ್ಟ್‌ನಿಂದ ಹಣ ಕೊಡುವುದನ್ನು ನಿಲ್ಲಿಸಿದ್ದಾನೆ. ಇದರಿಂದಾಗಿ ಚಿನ್ನ ಹಾಗೂ ಹಣ ಕೊಟ್ಟವರು ಈತನನ್ನು ಹುಡುಕಲಾರಂಭಿಸಿದ್ದಾರೆ. ಈ ನಡುವೆ ಮಂಗಳಮುಖೀಯೊಬ್ಬರು ಚಿನ್ನಾಭರಣ ಬಿಡಿಸಿಕೊಡುವಂತೆ ಹಲವು ಬಾರಿ ಕೇಳಿದ್ದಾರೆ. ಇದರಿಂದಾಗಿ ಒಂದು ತಿಂಗಳ ಹಿಂದೆ ಮನೆಯಿಂದ ಪರಾರಿಯಾಗಿದ್ದಾನೆ. ಈತನ ತಾಯಿ ಮಗ ಕಾಣೆಯಾಗಿದ್ದಾನೆಂದು ದೂರು ಕೂಡ ಕೊಟ್ಟಿದ್ದರು. ಇದಾದ ಬಳಿಕ ಜಿಲ್ಲಾ ಪೊಲೀಸರಿಗೆ ಪತ್ರ ಬರೆದಿರುವ ಸೋಮಶೇಖರ್‌, ತನಗೆ ಪ್ರಾಣ ಭಯವಿದೆ. ರಕ್ಷಣೆ ನೀಡಬೇಕು ಎಂದು ಕೆಲವರ ಹೆಸರನ್ನು ನೀಡಿದ್ದನು ಎಂದು ತಿಳಿದು ಬಂದಿದೆ.

ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು, ಮಂಗಳಮುಖಿಯನ್ನು ವಿಚಾರಣೆ ನಡೆಸಿದಾಗ, ತಾನೇ ಆತನಿಂದ ವಂಚನೆಗೊಳಗಾಗಿದ್ದೇನೆ. ಅರ್ಧ ಕೆ.ಜಿ.ಚಿನ್ನವನ್ನು ಕೊಡದೇ ವಂಚಿಸಿದ್ದಾನೆ ಎಂದು ಆಕೆಯೇ ದೂರು ನೀಡಿದ್ದಾರೆ. ಇದರ ಬೆನ್ನತ್ತಿದ ಪೊಲೀಸರು ಬೆಂಗಳೂರಿನಲ್ಲಿದ್ದ ಸೋಮಶೇಖರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Advertisement

ಫೈನಾನ್ಸ್‌ ಅಧಿಕಾರಿಗಳ ವಿಚಾರಣೆ:
ಕಳೆದ 5-6 ದಿನದಿಂದ ವಿಚಾರಣೆ ನಡೆಸಲಾಗುತ್ತಿದ್ದು, ಹಲವು ವಿಷಯವನ್ನು ಬಹಿರಂಗಗೊಳಿಸಿದ್ದಾನೆ. ಜತೆಗೆ ಹಣ ಹಾಗೂ ಚಿನ್ನಾಭರಣ ಕೊಟ್ಟವರ ಹೆಸರನ್ನು ಪೊಲೀಸರಿಗೆ ನೀಡಿದ್ದಾನೆ. ಮೂರು ಫೈನಾನ್ಸ್‌ ಕಂಪನಿಗಳಲ್ಲಿ ಅಡವಿಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದು, ಆ ಫೈನಾನ್ಸ್‌ ಕಂಪನಿಯ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸೋಮಶೇಖರ್‌ನನ್ನೇ ಫೈನಾನ್ಸ್‌ಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಲಾಗುತ್ತಿದೆ. 2 ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಫೈನಾನ್ಸ್‌ ಕಂಪನಿಯಿಂದ ಈತನನ್ನು ತೆಗೆದು ಹಾಕಲಾಗಿದೆ. ಸದ್ಯ ನ್ಯಾಯಾಲಯದ ಆದೇಶದ ಮೇರೆಗೆ 7 ದಿನ ವಶಕ್ಕೆ ಪಡೆದಿರುವ ಪೊಲೀಸರು, ಸುಮಾರು ಒಂದೂವರೆ ಕೋಟಿ ರೂ. ಚಿನ್ನಾಭರಣ ಹಾಗೂ ನಗದು ಹಣದ ಮಾಹಿತಿ ಕಲೆ ಹಾಕಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಧಿಕ ಬಡ್ಡಿಯ ಆಸೆಗೆ ಯಾಮಾರಿದರು
ವಾರಕ್ಕೆ ಶೇ.20, ತಿಂಗಳಿಗೆ ಶೇ.40ರಷ್ಟು ಬಡ್ಡಿ ಹಣದ ಆಸೆ ತೋರಿಸಿ ಮಹಿಳೆಯರನ್ನು ಅದರಲ್ಲಿಯೂ ಆರ್ಥಿಕವಾಗಿ ಸಬಲರಾಗಿರುವವರನ್ನು ಯಾಮಾರಿಸಿದ್ದಾನೆ. ಇನ್ನು ಲಾಕ್‌ಡೌನ್‌ ಸಮಯದಲ್ಲಿಯೇ ಈತ ಮಹಿಳೆಯಿಂದ ಹೆಚ್ಚು ಚಿನ್ನಾಭರಣ ಹಾಗೂ ಹಣ ವಸೂಲಿ ಮಾಡಿದ್ದಾನೆ. ಮಂಗಳಮುಖೀ, ಮಹಿಳಾ ರಾಜಕಾರಣಿಗಳು, ಖಾಸಗಿ ಬ್ಯಾಂಕ್‌ ಉದ್ಯೋಗಿ, ಗೃಹಿಣಿಯರು ಸೇರಿದ್ದಾರೆ. ಕೆಲವರು ಮರ್ಯಾದೆಗೆ ಅಂಜಿ ಸ್ವತಃ ಹಣ ಕೊಟ್ಟು ಚಿನ್ನಾಭರಣ ಬಿಡಿಸಿಕೊಂಡು ಹೋಗಿದ್ದಾರೆ. ಇನ್ನೂ ಕೆಲ ಮಹಿಳೆಯರು ಮನೆಯವರ ಭಯದಿಂದ ಮೋಸದ ಬಗ್ಗೆ ಹೇಳಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಇನ್ನು ಈತನ ಜತೆಗೆ ನಗರದ ಚಿನ್ನಾಭರಣ ಮಾರಾಟಗಾರರ ಮನೆಯ ಮಹಿಳೆಯೊಬ್ಬರು ಶಾಮೀಲಾಗಿದ್ದು, ಇಬ್ಬರು ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆದರೆ, ಇದಕ್ಕೆ ಯಾವುದೇ ಖಚಿತ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next