Advertisement

ವಿದ್ಯಾರ್ಥಿನಿ ಸಾವು: ಆರೋಪಿಗೆ 2 ವರ್ಷ ಜೈಲು

11:46 AM Feb 07, 2022 | Team Udayavani |

ಕಲಬುರಗಿ: ಸೈಕಲ್‌ ಮೇಲೆ ಕುಡಗೋಲು ಸಾಗಿಸುತ್ತಿದ್ದಾಗ ವಿದ್ಯಾರ್ಥಿನಿ ಕುತ್ತಿಗೆಗೆ ತಲುಗಿ ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಮೂರನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

Advertisement

ಮಹ್ಮದ್‌ ಮಹೆಬೂಬ್‌ ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿ. 2019ರ ಏಪ್ರಿಲ್‌ 12ರಂದು ವಿದ್ಯಾರ್ಥಿನಿ ಮೇಘಾ ಹೀರೆಗೌಡರ ಎಂಬ ವಿದ್ಯಾರ್ಥಿನಿಯ ಸಾವಿಗೆ ಈತ ಕಾರಣವಾಗಿದ್ದ. ಇಲ್ಲಿನ ರಾಮ ಮಂದಿರ ರಿಂಗ್‌ ರೋಡ್‌ನಿಂದ ನಾಗನಹಳ್ಳಿ ರಿಂಗ್‌ ರೋಡ್‌ಗೆ ಬರುವ ಓಝಾ ಲೇಔಟ್‌ ಕ್ರಾಸ್‌ ಸಮೀಪ ಮಹ್ಮದ್‌ ಮಹೆಬೂಬ್‌ ಸೈಕಲ್‌ ಮೇಲೆ ಬಿದುರಿನ ಬಡಿಗೆಗೆ ಹರಿತವಾದ ಕುಡಗೋಲು ತೆಗೆದುಕೊಂಡು ಹೋಗುತ್ತಿದ್ದ. ಇದೇ ವೇಳೆ ವಿದ್ಯಾರ್ಥಿನಿ ಮೇಘಾ ತನ್ನ ಸ್ಕೂಟಿ ಮೇಲೆ ರಾಮಮಂದಿರ ರಿಂಗ್‌ ರೋಡ್‌ ಕಡೆಯಿಂದ ಬರುತ್ತಿದ್ದಳು. ಈ ವೇಳೆ ನಾಗನಹಳ್ಳಿ ಕಡೆ ಮಹೆಬೂಬ್‌ ಸೈಕಲ್‌ ತಿರುಗಿಸಿದಾಗ ಸ್ಕೂಟಿ ಮೇಲಿದ್ದ ಮೇಘಾರ ಕುತ್ತಿಗೆಗೆ ಕುಡಗೋಲು ತಲುಗಿ ಆಕೆ ರಕ್ತಸ್ರಾವದಿಂದ ಮೃತಪಟ್ಟಿದ್ದಳು.

ಈ ಬಗ್ಗೆ ಸಂಚಾರ ಠಾಣೆಯ ಅಂದಿನ ಇನ್‌ ಸ್ಪೆಕ್ಟರ್‌ ಮಹಾದೇವ ಪಂಚಮುಖೀ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ ವಿ.ಎನ್‌. ಅವರು, ಆರೋಪಿ ಕುಡಗೋಲಿಗೆ ಬಟ್ಟೆ ಸುತ್ತದೇ ನಿರ್ಲಕ್ಷ್ಯದಿಂದ ಸಾಗಿಸುತ್ತಿದ್ದರಿಂದ ವಿದ್ಯಾರ್ಥಿನಿ ಸಾವಿಗೆ ಕಾರಣವಾಗಿದ್ದಾನೆ ಎಂದು ಎರಡು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಹಣವನ್ನು ಮೃತಳ ತಾಯಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಮೂರನೇ ಅಪರ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next