ಬೆಂಗಳೂರು: ಯಲಹಂಕ ಮತ್ತು ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿಯಿಂದೀಚೆಗೆ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ರೈತ ಸೇರಿ ಮೂವರು ಮೃತಪಟ್ಟಿದ್ದಾರೆ.
ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಶುಕ್ರವಾರ ನಸುಕಿನಲ್ಲಿ ಗೂಡ್ಸ್ ಆಟೋಗೆ ತೆಲಂಗಾಣದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಗೊಳ್ಳು ಗ್ರಾಮದ ಎನ್.ಶಿವಪ್ಪ (24) ಮತ್ತು ಸಹ ಪ್ರಯಾಣಿಕ ನ್ಯಾತಪ್ಪ(50) ಮೃತಪಟ್ಟಿದ್ದಾರೆ.
ನ್ಯಾತಪ್ಪ ತನ್ನ ಜಮೀನಿನಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪನ್ನು ಕೆ.ಆರ್.ಮಾರುಕಟ್ಟೆಗೆ ಹಾಕಲು ಗೂಡ್ಸ್ ಆಟೋದಲ್ಲಿ ನಗರಕ್ಕೆ ಬರುತ್ತಿದ್ದರು. ಬೆಂಗಳೂರು- ಬಳ್ಳಾರಿ ಮುಖ್ಯರಸ್ತೆಯ ಮೇಲ್ಸೇತುವೆ ಬಳಿ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಪಲ್ಟಿ ಹೊಡೆದಿದ್ದು, ಕೆಳಗೆ ಬಿದ್ದ ಚಾಲಕ ಶಿವಪ್ಪ ಮತ್ತು ನ್ಯಾತಪ್ಪನ ಮೇಲೆ ಬಸ್ ಹರಿದಿದೆ. ಹೀಗಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಂದೆಡೆ, ಗುರುವಾರ ರಾತ್ರಿ 9.30ರ ಸುಮಾರಿನಲ್ಲಿ ಚಿಕ್ಕಪೇಟೆ ಸಂಚಾರ ಠಾಣೆ ವ್ಯಾಪ್ತಿ ಯಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ಮೂವರ ಮೇಲೆ ಬಸ್ ಕೆಎಸ್‌ಆರ್‌ಟಿಸಿ ಬಸ್ ಹರಿದಿದ್ದು, ಘಟನೆಯಲ್ಲಿ ವ್ಯಕ್ತಿಯೊ ಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ಬಿಹಾರ ಮೂಲದ ಛಲವಾದಿ ಪಾಳ್ಯದ ನಿವಾಸಿ ನಾಸಿರುದ್ದೀನ್ (50) ಮೃತರು. ಘಟನೆಯಲ್ಲಿ ನಸೀರ್ ಮತ್ತು ಕುಮುದಾ ಎಂಬ ಮಹಿಳೆ ಕಾಲು ಮುರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಸಿರುದ್ದೀನ್ ನಗರದ ಬ್ಯಾಗ್ ಅಂಗಡಿ ಯೊಂದರಲ್ಲಿ ಕೆಲಸಕ್ಕಿದ್ದರು.
ರಾತ್ರಿ ಕೆಲಸ ಮುಗಿಸಿ ಸ್ನೇಹಿತ ನಸೀರ್ ಜತೆ ಗೂಡ್‌ಶೆಡ್ ರಸ್ತೆಯಲ್ಲಿ ರುವ ಬಿಬಿಎಂಪಿ ಕಚೇರಿ ಬಳಿ ನಡೆದು ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಚಾಲಕನನ್ನು ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.