ಹೊಸದಿಲ್ಲಿ: ಕಳೆದ ತಿಂಗಳು ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಮುಖ್ಯಸ್ಥ ನಫೆ ಸಿಂಗ್ ರಾಠಿ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಶೂಟರ್‌ಗಳನ್ನು ಇಂದು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಗಳನ್ನು ಸೌರಭ್ ಮತ್ತು ಆಶಿಶ್ ಎಂದು ಗುರುತಿಸಲಾಗಿದ್ದು, ಹರ್ಯಾಣ ಪೊಲೀಸರು ಮತ್ತು ದೆಹಲಿ ಪೊಲೀಸರ ವಿಶೇಷ ದಳ ಗೋವಾದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೆರೆಹಿಡಿದಿದ್ದಾರೆ. ಇಬ್ಬರೂ ಶೂಟರ್‌ಗಳು ಕುಖ್ಯಾತ ಕಪಿಲ್ ಸಾಂಗ್ವಾನ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಫೆಬ್ರವರಿ 25 ರಂದು, ಹರಿಯಾಣದ ಜಜ್ಜರ್ ಜಿಲ್ಲೆಯ ರೈಲ್ವೇ ಕ್ರಾಸಿಂಗ್ ಬಳಿ ರಾಠಿಯನ್ನು ಕರೆದೊಯ್ಯುತ್ತಿದ್ದ ಕಾರು ನಿಂತದ್ದ ವೇಳೆ ಐ20 ಕಾರಿನಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ಅಪರಿಚಿತರ ತಂಡ ಎಸ್‌ಯುವಿ ಕಾರಿನ ಮೇಲೆ ಗುಂಡುಗಳ ಸುರಿಮಳೆಯನ್ನು ಸುರಿಸಿದ್ದಾರೆ. ಈ ಘಟನೆಯಲ್ಲಿ 66 ವರ್ಷದ ರಾಠಿ ಮತ್ತು ಒಬ್ಬ ನಿಷ್ಠಾವಂತ ಸಹಾಯಕ ಕೊಲ್ಲಲ್ಪಟ್ಟರು, ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧ ವಿಶೇಷ ತನಿಖಾ ತಂಡ ರಚಿಸಿ ದಾಳಿಕೋರರ ಪತ್ತೆಗೆ ಪೊಲೀಸರು ಬಲೆ ಬಿಸಿದ್ದು ಅದರಂತೆ ಇಬ್ಬರು ದಾಳಿಕೋರರನ್ನು ಗೋವಾದಲ್ಲಿ ಬಂಧಿಸಿದ್ದು ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಜಜ್ಜರ್ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ಜೈನ್ ಹೇಳಿದ್ದಾರೆ. ದಾಳಿಕೋರರು ಬಳಸಿದ್ದ ಕಾರನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Election: ಮೋದಿ 3.0 ಸರಕಾರಕ್ಕೆ ಈಗಲೇ ಅಜೆಂಡಾ! ಸಚಿವರಿಗೆ ಗೆಲುವಿನ ಮಂತ್ರ ಬೋಧಿಸಿದ ಮೋದಿ