Advertisement

2 ಪ್ರತ್ಯೇಕ ಅತ್ಯಾಚಾರ ಪ್ರಕರಣ; ಜಾಮೀನು ಅರ್ಜಿ ವಜಾ

12:46 PM Mar 09, 2017 | Team Udayavani |

ಉಡುಪಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಸಂಬಂಧಿಸಿ 2 ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಗಳ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಧೀಶ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ ಅವರು ವಜಾ ಮಾಡಿದ್ದಾರೆ.

Advertisement

“ಬುದ್ಧಿಮಾಂದ್ಯ ಸಹೋದರಿಯ ಅತ್ಯಾಚಾರದ ಆರೋಪಿ’
ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆಳಾರ್ಕಳಬೆಟ್ಟು ಗ್ರಾಮದ ನೇಜಾರಿನಲ್ಲಿ ಒಡಹುಟ್ಟಿದ 14ರ ಹರೆಯದ ಬುದ್ಧಿಮಾಂದ್ಯ ತಂಗಿಯನ್ನು 2016ರ ಜೂನ್‌ನಲ್ಲಿ ಅತ್ಯಾಚಾರ ಮಾಡಿದ್ದ ಶ್ರೀಧರ್‌ನ ಜಾಮೀನು ಅರ್ಜಿ ವಜಾಗೊಂಡಿದೆ.  ತಂಗಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ ಮಾಡಿದ್ದ ಅಣ್ಣನು ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದ. ಇದಕ್ಕೆ ಕಾರಣ ಪ್ರದೀಪ ಯಾನೆ ಗುಮ್ಮ, ವಿದ್ಯಾಧರ ಹಾಗೂ ಶಾಲಾ ವಿದ್ಯಾರ್ಥಿಯೋರ್ವನ ಹೆಸರು ಹೇಳುವಂತೆ ಅಣ್ಣನೇ ಹೇಳಿದ್ದ. ಅವರೆಲ್ಲರು ಆರೋಪಿಗಳಲ್ಲದಿದ್ದರೂ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಅನುಮಾನಗೊಂಡಿದ್ದ ಪೊಲೀಸರು ಆರೋಪಿಗಳ ಸಹಿತ ಬಾಲಕಿಯ ಅಣ್ಣ ಶ್ರೀಧರ್‌ನ ರಕ್ತದ ಮಾದರಿಯನ್ನು ಸಂಗ್ರಹಿಸಿ ಭ್ರೂಣದ ಡಿಎನ್‌ಎಗೆ ತಾಳೆಗೊಳಿಸಲು ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿಂದ ಬಂದ ವರದಿಯಲ್ಲಿ ಶ್ರೀಧರನೇ ಆ ಭ್ರೂಣಕ್ಕೆ ತಂದೆ ಎನ್ನುವುದು ಖಾತ್ರಿಯಾಗಿತ್ತು. ಆ ಬಳಿಕ ಶ್ರೀಧರನನ್ನು ಬಂಧಿಸಿದ್ದ ಪೊಲೀಸರು ಕೋರ್ಟ್‌ ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್‌ ಪರವಾಗಿ ಪೋಕ್ಸೋ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಅವರು ವಾದವನ್ನು ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.

“ಡಿಎನ್‌ಎ ನೆಗೆಟಿವ್‌ ಬಂದರೂ ಜಾಮೀನು ವಜಾಗೊಂಡಿತು’
ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಬೆಳ್ಮಣ್ಣು ಗ್ರಾಮದಲ್ಲಿ 12 ವರ್ಷದ ಬಾಲಕಿಯ ಮೇಲೆ 2016ರ ಎಪ್ರಿಲ್‌ನಲ್ಲಿ ಆಕೆಯ ಮಾವ ನಾಗರಾಜ್‌ ಅಲಿಯಾಸ್‌ ನಾಗೇಶನೇ ಅತ್ಯಾಚಾರ ಮಾಡಿದ್ದ ಎನ್ನುವ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಆರೋಪಿಯ ಜಾಮೀನು ಅರ್ಜಿಯೂ ವಜಾಗೊಂಡಿದೆ.

ಆರೋಪಿಯು ಬೆದರಿಕೆಯೊಡ್ಡಿ ಪದೇ ಪದೇ ಅತ್ಯಾಚಾರ ಮಾಡಿದ್ದ ಕಾರಣ ಆಕೆ ಗರ್ಭವತಿಯಾಗಿದ್ದಳು. ಬಾಲಧಿಕಿಯ ತಂದೆ-ತಾಯಿ ಮೃತಪಟ್ಟಿದ್ದು, ಅಜ್ಜಿಯ ಆರೈಕೆಯಲ್ಲಿದ್ದಳು. ಪೊಲೀಸರು ಬಾಲಕಿ ಹಾಗೂ ಮಾವನ ರಕ್ತದ ಮಾದರಿ ಸಂಗ್ರಹಿಸಿ ಡಿಎನ್‌ಎಗೆ ಕಳುಹಿಸಿದ್ದರು. ಆದರೆ ಅಲ್ಲಿನ ವರದಿಯು ನೆಗೆಟಿವ್‌ ಬಂದಿತ್ತು. ಆದರೆ ಇಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಅರಿತುಕೊಂಡ ಪೋಕ್ಸೋ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿಯವರು, ಜಾಮೀನು ಅರ್ಜಿ ಪರಿಶೀಲಿಸುವಾಗ ಡಿಎನ್‌ಎ ವರದಿಯನ್ನು ಮಾತ್ರ ಪರಿಗಣಿಸಬೇಡಿ. ಇತರ ವಿಷಯಗಳನ್ನು ಕೂಡ ಮಾನ್ಯ ಮಾಡಿ ನ್ಯಾಯ ಒದಗಿಸಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

Advertisement

ಡಿಎನ್‌ಎ ನೆಗೆಟಿವ್‌ ಬರಲು ಹಲವು ಕಾರಣಗಳು ಇರುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಸರಿಯಾದ ಪ್ರಮಾಣದಲ್ಲಿ ಡಿಎನ್‌ಎಗೆ ರಕ್ತವನ್ನು ಸಂಗ್ರಹಿಸದೇ ಇದ್ದರೆ, ಸೂಕ್ತ ರೀತಿಯಲ್ಲಿ ಶೇಖರಣೆ ಮಾಡಿಲ್ಲವಾದರೆ ಹಾಗೂ ಕ್ಲಪ್ತ ಸಮಯಕ್ಕೆ ಪರೀಕ್ಷೆಗೆ ಕಳುಹಿಸದೆ ವಿಳಂಬ ಮಾಡಿದ್ದಲ್ಲಿ ಡಿಎನ್‌ಎ ತಾಳೆಯಾಗದು ಎಂದು ವಿಧಿವಿಜ್ಞಾನ ತಂತ್ರಜ್ಞರು ಹೇಳುತ್ತಾರೆ. ಹಾಗಾಗಿ ಯಾಕೆ ನೆಗೆಟಿವ್‌ ಬಂದಿದೆ ಎನ್ನುವುದರ ಬಗ್ಗೆ ವೈದ್ಯರ ಸ್ವಯಂಹೇಳಿಕೆ ದಾಖಲಾಗುವವರೆಗೆ ಆರೋಪಿಗೆ ಜಾಮೀನು ನೀಡಬಾರದೆನ್ನುವ ವಾದವನ್ನು ಗಟ್ಟಿಯಾಗಿ ಸರಕಾರಿ ವಿಶೇಷ ಅಭಿಯೋಜಕ ವಿಜಯ ವಾಸು ಪೂಜಾರಿ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕ ಅವರು ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next