ಬುಲಂದ್ ಶಹರ್(ಲಕ್ನೋ):ಕೋವಿಡ್ 19 ವೈರಸ್ ಲಾಕ್ ಡೌನ್ ಜಾರಿಯಲ್ಲಿರುವಾಗಲೇ ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಸೋಮವಾರ ರಾತ್ರಿ ದೇವಾಲಯದಲ್ಲಿ ಇಬ್ಬರು ಸಾಧುಗಳನ್ನು ಹತ್ಯೆಗೈದಿರುವ ಘಟನೆ ಸೋಮವಾರ ನಡೆದಿದೆ ಎಂದು ವರದಿ ತಿಳಿಸಿದೆ.
55ವರ್ಷದ ಜಗನ್ ದಾಸ್ ಹಾಗೂ 35 ವರ್ಷದ ಸೇವಾದಾಸ್ ಎಂಬ ಸಾಧುವನ್ನು ತಲವಾರಿನಿಂದ ಕಡಿದು ಹತ್ಯೆಗೈಯಲಾಗಿದೆ. ಇಬ್ಬರು ಸಾಧುಗಳು ಸಣ್ಣ ದೇವಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸ್ತವ್ಯ ಹೂಡಿದ್ದರು. ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ತನಿಖೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಂತಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಬ್ಬರು ಸಾಧುಗಳನ್ನು ಕೊಲೆಗೈಯುವ ವೇಳೆ ಈ ವ್ಯಕ್ತಿ ಮಾದಕ ದ್ರವ್ಯ ಸೇವನೆ ಮಾಡಿದ್ದು. ಈಗಲೂ ಆತನ ಅಮಲು ಇಳಿದಿಲ್ಲ. ಮಾದಕ ದ್ರವ್ಯದ ಅಮಲು ಇಳಿದ ಬಳಿಕ ವಿಚಾರಣೆ ಆರಂಭಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಈ ಘಟನೆಯ ಹಿಂದೆ ಯಾವುದೇ ಕೋಮು ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದು, ಪೋಸ್ಟ್ ಮಾರ್ಟ್ಂ ವರದಿಗಾಗಿ ಕಾಯಲಾಗುತ್ತಿದೆ.
ಏಪ್ರಿಲ್ 16ರಂದು ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಮಕ್ಕಳ ಅಂಗಾಂಗ ಕದಿಯಲು ಬಂದಿದ್ದಾರೆ ಎಂದು ಆರೋಪಿಸಿ ಗುಂಪೊಂದು ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಸಾಧುಗಳನ್ನು ಅಡ್ಡಗಟ್ಟಿ ಹೊರಗೆಳೆದು ಹೊಡೆದು ಹತ್ಯೆಗೈದಿದ್ದರು. ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.