Advertisement

ಕೋವಿಡ್‌ ನಿಯಮ ಉಲ್ಲಂಘನೆ 2 ಖಾಸಗಿ ಆಸ್ಪತ್ರೆಗಳಿಗೆ ತಲಾ 1 ಲಕ್ಷ ರೂ. ದಂಡ

07:59 PM Sep 28, 2020 | Suhan S |

ಥಾಣೆ, ಸೆ. 27: ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಅನುಮತಿಯಿಲ್ಲದೆ ಸೋಂಕಿತರಿಗೆ ಚಿಕಿತ್ಸೆ ನೀಡಿದ ಆರೋಪದ ಮೇಲೆ ನವಿಮುಂಬಯಿಯ ಎರಡು ಖಾಸಗಿ ಆಸ್ಪತ್ರೆಗಳಿಗೆ ತಲಾ 1 ಲಕ್ಷ ರೂ.ದಂಡ ವಿಧಿಸಲಾಗಿದೆ.

Advertisement

ಐರೋಲಿಯ ಕ್ರಿಟಿ ಕೇರ್‌ ಐಸಿಯು ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವಾಶಿಯಗ್ಲೋಬಲ್‌ 5 ಹೆಲ್ತ್ ಕೇರ್‌ (ಕುನ್ನುರೆ ಆಸ್ಪತ್ರೆ) ಗಳಿಗೆ ಸೆ. 19ರಂದು ಶೋಕಾಸ್‌ ನೋಟಿಸ್‌ ನೀಡಲಾಗಿದ್ದು, ಆದರೆ ಅವು ನಿರ್ದಿಷ್ಟ ಅವಧಿಯಲ್ಲಿ ಅದಕ್ಕೆ ಉತ್ತರಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ನವಿಮುಂಬಯಿ ಮನಪಾ (ಎನ್‌ಎಂಎಂಸಿ) ಆಯುಕ್ತ ಅಭಿಜಿತ್‌ ಭಂಗಾರ್‌ ಅವರು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಆಸ್ಪತ್ರೆಗಳಿಗೆ ತಲಾ 1 ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ ಎಂದು ಎನ್‌ಎಂಎಂಸಿ ವಕ್ತಾರ ಮಹೇಂದ್ರ ಕೊಂಡೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗಳು ಅನುಮತಿಯಿಲ್ಲದೆ ಕೋವಿಡ್‌ ಸೊಂಕಿತರನ್ನು ದಾಖಲಿಸುತ್ತಿವೆ ಮತ್ತು ಚಿಕಿತ್ಸೆ ನೀಡುತ್ತಿವೆ ಎಂದು ಭಂಗಾರ್‌ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಕಾಯಿದೆ ಮತ್ತು ಸಂಬಂಧಿತ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ನಾಗರಿಕ ಸಂಸ್ಥೆಯು ಈ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆಯುಕ್ತರು ಹೇಳಿದ್ದಾರೆ.

ಮುಂದಿನ ಆದೇಶದವರೆಗೆ ಯಾವುದೇ ಕೋವಿಡ್‌ ಸೋಂಕಿತರನ್ನು ದಾಖಲಿಸದಂತೆ ಆಸ್ಪತ್ರೆಗಳಿಗೆ ನಿರ್ದೇಶಿಸಲಾಗಿದೆ ಹಾಗೂ ಪ್ರಸ್ತುತ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಐಸಿಎಂಆರ್‌ ಮತ್ತು ಮಹಾರಾಷ್ಟ್ರ ಸರಕಾರದ ಮಾರ್ಗಸೂಚಿಗಳ ಪ್ರಕಾರ ಚಿಕಿತ್ಸೆ ನೀಡುವಂತೆ ಆದೇಶದಲ್ಲಿ ತಿಳಿಸಿದೆ. ಸರಕಾರದ ನಿರ್ದೇಶನದಂತೆ ಅವರು ಸೋಂಕಿತರಿಗೆ ಶುಲ್ಕ ವಿಧಿಸಬೇಕು ಎಂದು ಅದು ಹೇಳಿದೆ. ಈ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಕಠಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ :

Advertisement

ಮುಂಬಯಿ, ಸೆ. 27: ನಗರದಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ಆ್ಯಂಟಿಜೆನ್‌ ಟೆಸ್ಟ್‌ (ಆರ್‌ಟಿ -ಪಿಸಿಆರ್‌) ಅನ್ನು ಕಡ್ಡಾಯಗೊಳಿಸಿರುವುದಾಗಿ ಮೀರಾ-ಭಾಯಂದರ್‌ ಮುನ್ಸಿಪಲ್‌ ಕಮಿಷನರ್‌ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮಿಷನ್‌ ಬಿಗಿನ್‌ ಎಗೇನ್‌ ಅಡಿಯಲ್ಲಿ ಆಗಸ್ಟ್‌ 31ರಂದು ಮೀರಾ-ಭಾಯಂದರ್‌ನಲ್ಲಿ ಎಲ್ಲ ವ್ಯಾಪಾರ ಸಂಸ್ಥೆಗಳನ್ನು ತೆರೆಯಲಾಗಿದೆ. ಆಗಸ್ಟ್‌ 31ರಿಂದ ನಗರವು ಕೊರೊನಾ ಪ್ರಕರಣಗಳ ಹೆಚ್ಚಳವನ್ನು ಕಂಡಿದೆ. ಸೆಪ್ಟಂಬರ್‌ನಲ್ಲಿ ಮಾತ್ರ 2,000ಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸುಮಾರು 100 ಸೋಂಕಿತರು ಸಾವನ್ನಪ್ಪಿದ್ದಾರೆ.

ಹೊಸ ಆದೇಶದ ಪ್ರಕಾರ, ಅಂಗಡಿಗಳು, ಕಾರ್ಖಾನೆಗಳು ಇತ್ಯಾದಿಗಳಲ್ಲಿ ಕೆಲಸ ಮಾಡುವ ಎಲ್ಲರನ್ನೂ ಆ್ಯಂಟಿಜೆನ್‌ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿರುತ್ತದೆ. ಮೀರಾ ಭಾಯಂದರ್‌ ನಲ್ಲಿ ಗುರುವಾರ ತನಕ 17,309 ಪ್ರಕರಣಗಳು ಬೆಳಕಿಗೆ ಬಂದಿರುವುದು ಗಮನಾರ್ಹವಾಗಿದ್ದು, ಈವರೆಗೆ 14,832 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ದಿಂದ ಇದುವರೆಗೆ 534 ಮಂದಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next