ನವದೆಹಲಿ: ಮಹಾರಾಷ್ಟ್ರದಲ್ಲಿ H3N2 ವೈರಸ್ ಇನ್ಫ್ಲುಯೆನ್ಸದಿಂದ ಎರಡು ಮೃತ್ಯು ಸಂಭವಿಸಿದ್ದು, ಆ ಪೈಕಿ ಎಂಬಿಬಿಎಸ್ ವಿದ್ಯಾರ್ಥಿ ಸೇರಿದ್ದಾರೆ.
ಮಹಾರಾಷ್ಟ್ರ ಆರೋಗ್ಯ ಸಚಿವ ತಾನಾಜಿ ಸಾವಂತ್ ಬುಧವಾರ ವಿಧಾನಸಭೆಗೆ ವಿವರ ನೀಡಿದ್ದು, ನಾಗಪುರದಲ್ಲಿ 74 ವರ್ಷದ ವ್ಯಕ್ತಿ ಮತ್ತು ಅಹ್ಮದ್‌ನಗರದಲ್ಲಿ 23 ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸೇರಿದಂತೆ ಇಬ್ಬರು ಜ್ವರದಿಂದ ಕೊನೆಯುಸಿರೆಳೆದಿದ್ದಾರೆ ರಾಜ್ಯದಲ್ಲಿ 361 ಇನ್‌ಫ್ಲುಯೆಂಜಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವರು ಸಲಹೆ ನೀಡಿದ್ದಾರೆ.
ಈ ಎರಡು H3N2 ವೈರಸ್ ಪ್ರಕರಣಗಳ ಬಳಿಕ ಭಾರತದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ, ಮೊದಲ ಮೃತ್ಯು ಹಾಸನ ಜಿಲ್ಲೆಯ 82 ವರ್ಷದ ವ್ಯಕ್ತಿಯದ್ದಾಗಿತ್ತು.
ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ
Related Articles
H3N2 ವೈರಸ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ 8 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಮಾರ್ಚ್ 16 (ಗುರುವಾರ) ರಿಂದ ಮಾರ್ಚ್ 26 (ಭಾನುವಾರ) ವರೆಗೆ ಮುಚ್ಚಲಾಗುವುದು ಎಂದು ಪುದುಚೇರಿ ಸರಕಾರ ಬುಧವಾರ ಘೋಷಿಸಿತು.
ತಮಿಳುನಾಡು, ದೆಹಲಿ, ಗುಜರಾತ್ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಚ್3ಎನ್2 ಪ್ರಕರಣಗಳು ಹೆಚ್ಚಾಗುತ್ತಿವೆ.
ದೆಹಲಿ ಸರಕಾರ ವು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಐಸೋಲೇಷನ್ ವಾರ್ಡ್ ರಚಿಸಿದ್ದು, 15 ವೈದ್ಯರ ತಂಡವನ್ನೂ ರಚಿಸಲಾಗಿದೆ.
ಕೊರೊನಾ ಏರಿಕೆ
117 ದಿನಗಳ ಬಳಿಕ ದೇಶದಲ್ಲಿ ಬುಧವಾರ 600 ಮಂದಿಗೆ ಕೊರೊನಾ ದೃಢಪಟ್ಟಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 4,197ಕ್ಕೇರಿದೆ. 24 ಗಂಟೆಗಳಲ್ಲಿ 618 ಹೊಸ ಕೇಸುಗಳು ಪತ್ತೆಯಾಗಿದ್ದು, 5 ಮಂದಿ ಬಲಿಯಾಗಿದ್ದಾರೆ. ಇಬ್ಬರು ಕರ್ನಾಟಕದವರು, ಇಬ್ಬರು ಮಹಾರಾಷ್ಟ್ರ ಮತ್ತು ಉತ್ತರಾಖಂಡದಲ್ಲಿ ಒಂದು ಬಲಿಯಾಗಿದೆ.