ಕೈರೋ: ರೈಲು ಹಳಿ ತಪ್ಪಿದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟು, 16 ಮಂದಿ ಗಾಯಗೊಂಡಿರುವ ಘಟನೆ ಈಜಿಪ್ಟ್ ಉತ್ತರ ಕೈರೋದಲ್ಲಿ ಮಂಗಳವಾರ ( ಮಾ. 7 ರಂದು ) ನಡೆದಿದೆ.
ಪ್ಯಾಸೆಂಜರ್ ರೈಲು ನೈಲ್ ಡೆಲ್ಟಾದ ಮೆನೌಫ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಕಲಿಯುಬ್ ನಗರದ ನಿಲ್ದಾಣದ ಮೂಲಕ ಪ್ರಯಾಣಿಸುತ್ತಿದ್ದಾಗ ಹಳಿತಪ್ಪಿದೆ. ಪರಿಣಾಮ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಪಘಾತಕ್ಕೆ ಸೂಕ್ತ ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಘಟನಾ ಸ್ಥಳಕ್ಕೆ 20 ಆಂಬ್ಯುಲೆನ್ಸ್ ಗಳನ್ನು ರವಾನಿಸಿ, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಜಿಪ್ಟ್ ನಲ್ಲಿ ರೈಲು ಹಳಿ ತಪ್ಪುವ ಘಟನೆ ಸಾಮಾನ್ಯವಾಗಿದೆ. 2021 ರಲ್ಲಿ ದಕ್ಷಿಣ ಈಜಿಪ್ಟಿನ ನಗರ ತಹತಾದಲ್ಲಿ ಎರಡು ರೈಲುಗಳು ಹಳಿ ತಪ್ಪಿ 32 ಮಂದಿ ಸಾವಿಗೀಡಾಗಿದ್ದರು. ಅದೇ ವರ್ಷ ಕಲಿಯುಬಿಯಾ ಪ್ರಾಂತ್ಯದಲ್ಲಿ ಮತ್ತೊಂದು ರೈಲು ಹಳಿ ತಪ್ಪಿ 11 ಮಂದಿ ಸಾವನ್ನಪ್ಪಿದ್ದರು. 2002 ರಲ್ಲಿ ಕೈರೋದಿಂದ ದಕ್ಷಿಣ ಈಜಿಪ್ಟ್‌ಗೆ ಹೋಗುತ್ತಿದ್ದ ರೈಲು ಹಳಿ ತಪ್ಪಿದ ಪರಿಣಾಮ 300 ಮಂದಿ ಮೃತಪಟ್ಟಿದ್ದರು. ಇದು ಈಜಿಪ್ಟ್ ನಲ್ಲಿ ನಡೆದ ದೊಡ್ಡ ದುರಂತಗಳಲ್ಲೊಂದು.