ಬೆಂಗಳೂರು: ರಾಜ್ಯದಲ್ಲಿ 2 ದಿನಗಳ ಕಾಲ ಚಳಿ ಮುಂದುವರಿಯಲಿದ್ದು, ಕೆಲ ಕಡೆ ಸಾಮಾನ್ಯಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳ ಕಾಲ ಕನಿಷ್ಠ ಉಷ್ಣಾಂಶವು ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಸಾಮಾನ್ಯಕ್ಕಿಂತ 5-6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಶೀತ ಮಾರುತಗಳು ಬೀಸಲಿದ್ದು, ಕರಾವಳಿ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಮುಂಜಾನೆ ದಟ್ಟ ಮಂಜು ಮುಸುಕಲಿದ್ದು, ಗರಿಷ್ಠ 27 ಹಾಗೂ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಬಾಗಲಕೋಟೆ 5.6, ವಿಜಯಪುರದಲ್ಲಿ 7, ಬಿದರ್ 7.5, ರಾಯಚೂರು 11.6, ಮಡಿಕೇರಿ 10.3, ಬೆಳಗಾವಿ 10.4, ಬೆಂಗಳೂರು 12.6, ಕಲಬುರಗಿ 13.5, ಹಂಪಿ 12.5, ಮಂಗಳೂರು 20.2 ಕನಿಷ್ಠ ಉಷ್ಣಾಂಶ ದಾಖಲಾಗಿದೆ.
Related Articles
ಉಷ್ಣಾಂಶದಲ್ಲಿ ಭಾರೀ ಕುಸಿತ
ಮಂಗಳವಾರ ಬಾಗಲಕೋಟೆ ಯಲ್ಲಿ ರಾಜ್ಯದ ಅತೀ ಕನಿಷ್ಠ 5.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ವಿಜಯಪುರದಲ್ಲಿ 7, ಬೀದರ್ 7.5, ಬೆಳಗಾವಿ 10.4, ರಾಯಚೂರು 11.6, ಬೆಂಗಳೂರು 12.6, ಕಲಬುರಗಿ 13.5, ಹಂಪಿ 12.5 ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಕಳೆದ ವರ್ಷ ಇದೇ ದಿನ ಬೆಳಗಾವಿಯಲ್ಲಿ ರಾಜ್ಯದ ಅತೀ ಕನಿಷ್ಠ ಉಷ್ಣಾಂಶ 11.1 ಡಿಗ್ರಿ ಸೆ. ಇತ್ತು.
ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿಯ ವರೆಗೆ ಇರಲಿದೆ. ಆದರೆ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ತಡವಾಗಿ ಚಳಿ ಪ್ರಾರಂಭವಾಗಿದೆ.
ಸದ್ಯ ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಶೀತಗಾಳಿ ಬೀಸ ಲಾರಂಭಿಸಿದ್ದು, ತೀವ್ರ ಚಳಿಯ ಅನುಭವ ಉಂಟಾಗುತ್ತಿದೆ.