Advertisement

ಬೂಸ್ಟರ್‌ ಡೋಸ್‌ ಪಡೆಯಲು 2 ಲಕ್ಷ ಮಂದಿ ಬಾಕಿ!

09:56 AM May 15, 2022 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣದಲ್ಲಿದ್ದು, ಪರಿಣಾಮ ಮುನ್ನೆಚ್ಚರಿಕೆ (ಬೂಸ್ಟರ್‌) ಡೋಸ್‌ ಲಸಿಕೆ ಪಡೆಯಲು ಹೆಚ್ಚಿನ ಮಂದಿ ಆಸಕ್ತಿ ತೋರಿಸುತ್ತಿಲ್ಲ.

Advertisement

ಆರೋಗ್ಯ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 2,15,000 ಮಂದಿ ಅರ್ಹರು ಇನ್ನೂ ಬೂಸ್ಟರ್‌ ಡೋಸ್‌ ಲಸಿಕೆ ಪಡೆದುಕೊಂಡಿಲ್ಲ.

ದ.ಕ. ಜಿಲ್ಲೆಯಲ್ಲಿ ಈವರೆಗೆ 2,80,000 ಮಂದಿ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಲು ಅರ್ಹರು. ಅದರಲ್ಲಿ 65,000 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದು, 2,15,000 ಮಂದಿ ಇನ್ನೂ ಲಸಿಕೆ ಪಡೆದುಕೊಳ್ಳಲು ಬಾಕಿ ಇದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಬೂಸ್ಟರ್‌ ಡೋಸ್‌ ಲಸಿಕೆ ಪಡೆ ಯಲು ಕೇಂದ್ರ ಸರಕಾರ ಈಗಾಗಲೇ ಅನುಮತಿ ನೀಡಿದೆ. 18ರಿಂದ 60 ವರ್ಷ ದೊಳಗಿನ ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಬೆಲೆಯೊಂದಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನಿಗದಿಗೊಳಿಸಲಾಗಿದೆ. ಸಾರ್ವಜನಿಕರು 2ನೇ ಡೋಸ್‌ ಲಸಿಕೆ ಪಡೆದು 9 ತಿಂಗಳುಗಳ ಬಳಿಕ ಬೂಸ್ಟರ್‌ ಡೋಸ್‌ ಪಡೆಯಬಹುದಾಗಿದ್ದು, ಎಪ್ರಿಲ್‌ 10ರಿಂದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್‌ ಡೋಸ್‌ ಪಡೆಯಲು ಅವಕಾಶ ನೀಡಲಾಗಿದೆ. ಆದರೆ ದ.ಕ. ಜಿಲ್ಲೆಯ ಜನರು ಬೂಸ್ಟರ್‌ ಪಡೆಯಲು ಆಸಕ್ತಿ ತೋರುತ್ತಿಲ್ಲ.

ದಾಸ್ತಾನು ನಿರ್ವಹಣೆ ಕಠಿನ

Advertisement

ಕೆಲವೊಂದು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯತೆ ಕಡಿಮೆ ಇದೆ. ಲಸಿಕೆ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚಿನ ಮಂದಿ ಬರದ ಕಾರಣ ದಾಸ್ತಾನು ನಿರ್ವಹಣೆಯೂ ಸವಾಲಾಗುತ್ತಿದೆ. ಖಾಸಗಿ ಆಸ್ಪತ್ರೆ ಪ್ರಮುಖರನ್ನು ಮನವೊಲಿಸಿ ಲಸಿಕೆ ಖರೀದಿ ಆಗ್ರ ಹಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಬೇಕಿದೆ. ಲಸಿಕೆ ಪಡೆದುಕೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಾಲಿಕೆ ವ್ಯಾಪ್ತಿ ಸೇರಿದಂತೆ ವಿವಿಧ ಕಡೆಗಳಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ನಿರಾಸಕ್ತಿಗೆ ಕಾರಣವೇನು?

ಸದ್ಯ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ರಾಜ್ಯ ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ಆದರೆ 18 ವರ್ಷ ದಿಂದ 59 ವರ್ಷದೊಳಗಿನ ಮಂದಿ ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ಬೆಲೆ ಕೊಟ್ಟು ಲಸಿಕೆ ಪಡೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ರಾಜ್ಯ/ಕೇಂದ್ರ ಸರಕಾರವು ಎಲ್ಲ ವಯೋಮಿತಿಯವರಿಗೆ ಬೂಸ್ಟರ್‌ ಡೋಸ್‌ ಉಚಿತವಾಗಿ ನೀಡಿದರೆ ಆಗ ಪಡೆದುಕೊಳ್ಳೋಣ ಎಂಬ ಭಾವನೆ ಅನೇಕರಲ್ಲಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಕೋವಿಡ್‌ ನಿಯಂತ್ರಣದಲ್ಲಿದೆ. ಒಂದಂಕಿಗಿಂತ ಏರಿಕೆಯಾಗಿಲ್ಲ. ಪರಿಣಾಮ, ಹಲವರಲ್ಲಿ ಕೋವಿಡ್‌ ಬಗ್ಗೆ ಇರುವ ಭಯ ಮರೆಯಾಗಿದೆ. ಇದು ಕೂಡ ಲಸಿಕೆ ಪಡೆದುಕೊಳ್ಳಲು ಹಿನ್ನಡೆಗೆ ಕಾರಣ ಎನ್ನುತ್ತಾರೆ ವೈದ್ಯರು.

ಲಸಿಕೆ ಪಡೆಯಲು ಮುಂದೆ ಬನ್ನಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೂಸ್ಟರ್‌ ಡೋಸ್‌ ಅರ್ಹ ಫಲಾನುಭವಿಗಳು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಕಾರಣ, ಪೂರಕ ಸ್ಪಂದನೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‌ ದೈನಂದಿನ ಪ್ರಕರಣ ಕಡಿಮೆ ಇದ್ದ ಕಾರಣ, ಲಸಿಕೆ ಪಡೆಯಲು ಹೆಚ್ಚಿನ ಮಂದಿ ನಿರಾಸಕ್ತಿ ತೋರುತ್ತಿದ್ದಾರೆ. ಮುಂಬರುವ ಅಪಾಯ ತಡೆಯುವ ನಿಟ್ಟಿನಲ್ಲಿ ಅರ್ಹರು ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಲು ಮುಂದೆಬರಬೇಕು. -ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

-ನವೀನ್‌ ಭಟ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next