Advertisement

ವಿತರಣೆಗಾಗಿ ಕಾದಿವೆ 2 ಲಕ್ಷ  ಸಸಿಗಳು

01:00 PM Apr 14, 2020 | Karthik A |

ಉಡುಪಿ: ಗಿಡ-ಮರಗಳನ್ನು ನೆಟ್ಟು ಪರಿಸರ ಸಮೃದ್ಧಿಗೆ ಉತ್ತೇಜನ ನೀಡಲು ಸರಕಾರ ಅರಣ್ಯ ಇಲಾಖೆ ಮೂಲಕ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುತ್ತಿದೆ. ಕುಂದಾಪುರ ವಿಭಾಗದ ಎಂಟು ವಲಯಗಳಲ್ಲಿ ತಲಾ ಒಂದು ನರ್ಸರಿಗಳಿದ್ದು ಇವುಗಳಲ್ಲಿ ಸಾರ್ವಜನಿಕ ವಿತರಣೆಗಾಗಿ ಹಾಗೂ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 1.45 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ರೆಗ್ಯುಲರ್‌ ಅರಣ್ಯ ವಿಭಾಗವಲ್ಲದೆ ಉಡುಪಿ ಜಿ.ಪಂ. ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸಾರ್ವಜನಿಕ ವಿತರಣೆಗಾಗಿ 65,000 ಗಿಡಗಳನ್ನು ಬೆಳೆಸಲಾಗಿದೆ.

Advertisement


ಯಾವೆಲ್ಲ ಸಸಿಗಳು?

ನೇರಳೆ, ಬೆತ್ತ, ಸಾಗುವಾನಿ, ರಕ್ತಚಂದನ, ಮಹಾಗನಿ, ದಾಲಿcನಿ, ಹಲಸು, ಬಾದಾಮಿ, ಕಿರಾಲುಬೋಗಿ, ರಾಂಪತ್ರೆ, ಹೆಬ್ಬೇವು, ಅಂಟುವಾಳ, ಬೆಂಗ, ಹೊಂಗೆ, ನಾಗಲಿಂಗ ಪುಷ್ಪ, ಹೊಳೆ ದಾಸವಾಳ, ಕಕ್ಕೆ, ಬೀಟೆ, ಮಾವು, ಅಶೋಕ, ಬಿಲ್ವಪತ್ರೆ, ನೆಲ್ಲಿ, ಪುನರ್‌ಪುಳಿ, ಮುತ್ತುಗ, ಶ್ರೀಗಂಧ, ಸಂಪಿಗೆ, ಶಿವಾನಿ, ಬಿಲ್ವಾರ, ಮುರಿಯ, ಸೆಳ್ಳೆ, ರೆಂಜ ಇತ್ಯಾದಿ ಗಿಡಗಳನ್ನು ಬೆಳೆಸಲಾಗಿದೆ. ಇದರಲ್ಲಿ ಹಣ್ಣು- ಹೂವು ಬಿಡುವ, ಉರುವಲು ಆಗುವ, ಗೃಹೋಪಯೋಗಿ ಗಿಡಗಳಿವೆ.

ರಿಯಾಯಿತಿ ದರ
ವಿತರಣೆಗಾಗಿ ಬೆಳೆಸಿದ ಸಸಿಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು.(58 ಗಾತ್ರದ ಸಸಿಗೆ 1 ರೂ., 812 ಗಾತ್ರದ ಸಸಿಗೆ 3 ರೂ. ನಿಗದಿಪಡಿಸಲಾಗಿದೆ. )


ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ 

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಸಸಿ ಇಚ್ಛಿಸುವ ರೈತರು ಸಸಿ ನೆಡಲು ಲಭ್ಯವಿರುವ ಸ್ಥಳಕ್ಕೆ ಸಂಬಂಧಿಸಿದ ಪಹಣಿ ಪತ್ರದೊಂದಿಗೆ ಸಮೀಪದ ವಲಯ ಕಚೇರಿಗೆ ತಾವು ಇಚ್ಛಿಸಿದ ಸಸಿಗಳ ವಿವರದೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಸಸಿ ಸರಬರಾಜು ಮಾಡಲಾಗುತ್ತದೆ. ಈ ಯೋಜನೆಯಡಿ ಸಸಿ ನೆಟ್ಟ ರೈತರಿಗೆ 1 ವರ್ಷದ ತರುವಾಯ ಪ್ರತಿ ಜೀವಿತ ಸಸಿಗೆ ಮೊದಲ ವರ್ಷದಲ್ಲಿ 40 ರೂ., ಎರಡನೇ ವರ್ಷದಲ್ಲಿ 30 ರೂ., 3ನೇ ವರ್ಷದಲ್ಲಿ 30 ರೂ. ಸಹಾಯಧನ ನೀಡಲಾಗುವುದು. ಯೋಜನೆಯಡಿ ಹೆಕ್ಟೇರ್‌ ಗೆ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಅವಕಾಶ ಇದೆ. 2 ವರ್ಷಗಳ ಹಿಂದೆ ಈ ಯೋಜನೆಯಡಿ ಒಂದು ಸಸಿಗೆ 40 ರೂ. ಇತ್ತು, ಹೋದ ವರ್ಷದಿಂದ 100 ರೂ.ಗೆ ಏರಿಕೆಯಾಗಿದೆ. ಇದು ಪಾಳುಬೀಳುವ ಜಾಗದಲ್ಲಿ ಸುಲಭದಲ್ಲಿ ಆದಾಯ ತರುವ ಯೋಜನೆಯಾಗಿದೆ.


ಸಬ್ಸಿಡಿ ದರ

ಒಂದು ಗಿಡ ಬೆಳೆಸಲು ಇಲಾಖೆಗೆ ಸುಮಾರು 30 ರೂ. ಖರ್ಚಾಗುತ್ತದೆ. ಸರಕಾರ ಸಬ್ಸಿಡಿ ದರದಲ್ಲಿ ಗಿಡಗಳನ್ನು ರೈತರಿಗೆ ವಿತರಿಸುತ್ತಿದೆ.  ಮೂರು ವರ್ಷಗಳಲ್ಲಿ 100 ರೂ. ಕೊಡಲಾಗುತ್ತದೆ. ರೈತರು ತಮ್ಮ ಜಾಗದಲ್ಲಿ ಗಿಡಗಳನ್ನು ನೆಟ್ಟು ಪರಿಸರಕ್ಕೂ ಸ್ವಂತಕ್ಕೂ ಪ್ರಯೋಜನ ಪಡೆದುಕೊಳ್ಳಬೇಕು.
– ಪ್ರಭಾಕರನ್‌, ಉಪ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next