ರಾಂಚಿ: ಜಾರ್ಖಂಡ್ ನ ದಿಯೋಗಢ್ ಜಿಲ್ಲೆಯ ಬಾಬಾ ಬೈದ್ಯನಾಥ್ ದೇವಾಲಯದ ಸಮೀಪದ ತ್ರಿಕುಟ ಪರ್ವತದಲ್ಲಿ ರೋಪ್ ವೇಯಲ್ಲಿ ಎರಡು ಕೇಬಲ್ ಕಾರ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ (ಏ.10) ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಯಾರೋ ಟೀಕೆ ಮಾಡುತ್ತಾರೆಂದು ಸಿಎಂ ಲಾಠಿ ಹಿಡಿದು ನಿಲ್ಲಲು ಸಾಧ್ಯವಿಲ್ಲ: ಬಿ.ಸಿ.ಪಾಟೀಲ್
ಅಧಿಕಾರಿಗಳ ಮಾಹಿತಿ ಪ್ರಕಾರ, ರೋಪ್ ವೇಯಲ್ಲಿನ ಕನಿಷ್ಠ 12 ಕ್ಯಾಬಿನ್ ಗಳಲ್ಲಿ ಇನ್ನೂ 48 ಮಂದಿ ಸಿಲುಕಿಕೊಂಡಿದ್ದು, ಅವರನ್ನೆಲ್ಲಾ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ತಾಂತ್ರಿಕ ದೋಷದ ಪರಿಣಾಮ ರೋಪ್ ವೇಯಲ್ಲಿ ಎರಡು ಕೇಬಲ್ ಕಾರ್ ಗಳು ಮುಖಾಮುಖಿ ಡಿಕ್ಕಿ ಹೊಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ಹೇಳಿದ್ದಾರೆ.
ಘಟನೆಯ ನಂತರ ರೋಪ್ ವೇ ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿರುವುದಾಗಿ ಪಿಟಿಐ ನ್ಯೂಸ್ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡವನ್ನು ಕಳುಹಿಸಲಾಗಿದೆ ಎಂದು ದಿಯೋಗಢ್ ಡೆಪ್ಯುಟಿ ಕಮಿಷನರ್ ಮಂಜುನಾಥ್ ಭಜಂತ್ರಿ ತಿಳಿಸಿದ್ದಾರೆ.
ತ್ರಿಕುಟ ಪರ್ವತದ ರೋಪ್ ವೇ ಭಾರತದ ಅತೀ ಎತ್ತರದ ಲಂಬ ರೋಪ್ ವೇ ಆಗಿರುವುದಾಗಿ ಜಾರ್ಖಂಡ್ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಬಾಬಾ ಬೈದ್ಯನಾಥ್ ದೇವಸ್ಥಾನದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ರೋಪ್ ವೇ ಸುಮಾರು 766 ಮೀಟರ್ ಉದ್ದವಿದೆ. ತ್ರಿಕುಟ ಪರ್ವತ 392 ಮೀಟರ್ ನಷ್ಟು ಎತ್ತರವಿದೆ. ರೋಪ್ ವೇಯಲ್ಲಿ 25 ಕ್ಯಾಬಿನ್ ಗಳಿದ್ದು, ಪ್ರತಿ ಕ್ಯಾಬಿನ್ ನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದಾಗಿದೆ ಎಂದು ವರದಿ ವಿವರಿಸಿದೆ.