ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ “ಕಿರಿಕ್ ಪಾರ್ಟಿ’ ಚಿತ್ರ ಯಶಸ್ಸು ಕಂಡು, ಅಂದಾಜು 50 ಕೋಟಿ ರೂಪಾಯಿ ಬಿಝಿನೆಸ್ ಮಾಡಿದ್ದು ನಿಮಗೆ ಗೊತ್ತೆ. ಮೂರು ಕೋಟಿ ರೂಪಾಯಿ ಬಜೆಟ್‌ನ “ಕಿರಿಕ್ ಪಾರ್ಟಿ’ ಚಿತ್ರ 50 ಕೋಟಿ ರೂಪಾಯಿ ಬಿಝಿನೆಸ್ ಮಾಡಿರೋದು ಸಣ್ಣ ಸಾಧನೆಯೇನಲ್ಲ. ಈಗ “ಕಿರಿಕ್ ಪಾರ್ಟಿ’ ಮತ್ತೂಂದು ವಿಷಯದಿಂದ ಸುದ್ದಿಯಲ್ಲಿದೆ. ಅದು ರೀಮೇಕ್ ರೈಟ್ಸ್.
ಹೌದು, “ಕಿರಿಕ್ ಪಾರ್ಟಿ’ ಚಿತ್ರದ ರೀಮೇಕ್ ರೈಟ್ಸ್ ಮಾರಾಟವಾಗಿದ್ದು, ಚಿತ್ರತಂಡ ಖುಷಿಯಾಗಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಿಗೆ “ಕಿರಿಕ್ ಪಾರ್ಟಿ’ ಚಿತ್ರದ ರೀಮೇಕ್ ರೈಟ್ಸ್ ಮಾರಾಟವಾಗಿದೆ. ಈ ಮೂರು ಭಾಷೆಗಳಿಂದ ಸುಮಾರು 2 ಕೋಟಿ ರೂಪಾಯಿ “ಪರಂವಾ’ ಸ್ಟುಡಿಯೋ ಅಕೌಂಟ್ ಸೇರಿದೆ. ಇನ್ನು ಮಲಯಾಳಂಗೆ ಡಬ್ ಮಾಡಿ ರಿಲೀಸ್ ಮಾಡುವ ಆಲೋಚನೆ ರಕ್ಷಿತ್ ಶೆಟ್ಟಿಯವರಿಗಿದೆ.
“ಪರಂವಾ ಸ್ಟುಡಿಯೋ’ ನಡಿ ನಿರ್ಮಾಣವಾದ ಮೊದಲ ಸಿನಿಮಾವೇ ಈ ಮಟ್ಟದ ಯಶಸ್ಸು ಕಂಡಿದ್ದರಿಂದ ರಕ್ಷಿತ್ ಶೆಟ್ಟಿ ಖುಷಿಯಾಗಿದ್ದಾರೆ. ಮುಂದೆಯೂ ಪರಂವಾ ಸ್ಟುಡಿಯೋದಿಂದ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುವ ಉದ್ದೇಶ ರಕ್ಷಿತ್‌ಗಿದೆ. ಅದೇ ಕಾರಣದಿಂದ “ಸೆವೆನ್ ಆಡ್ಸ್’ ಎಂಬ ಬರಹಗಾರರ ತಂಡವನ್ನು ಕಟ್ಟಿಕೊಂಡಿದ್ದಾರೆ.
ಬಹುತೇಕ ಇಂಜಿನಿಯರಿಂಗ್ ಹಿನ್ನೆಲೆ ಇರುವ ಈ ಬರಹಗಾರರು ನಿರಂತರವಾಗಿ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಲಿದ್ದಾರೆ. ಐಟಿ ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ ಅವರಿಗೆ ಈಗ ಅಷ್ಟು ಸಂಬಳ ಸಿಗುತ್ತಾ ಎಂದು ಕೇಳಬಹುದು. ಅದಕ್ಕೂ ರಕ್ಷಿತ್ ವ್ಯವಸ್ಥೆ ಮಾಡಿದ್ದಾರೆ. ರೀಮೇಕ್ ರೈಟ್ಸ್‌ನಿಂದ ಬಂದ ಎರಡು ಕೋಟಿ ರೂಪಾಯಿಯನ್ನು ಪರಂವಾ ಅಕೌಂಟ್‌ಗೆ ಹಾಕಿದ್ದು, ಅದರಿಂದ ಪ್ರತಿ ತಿಂಗಳು “ಸೆವೆನ್ ಆಡ್ಸ್’ನ ನ ಬರಹಗಾರರಿಗೆ ಸಂಬಳ ಹೋಗಲಿದೆ.
ಅದು ಐಟಿ ಕಂಪೆನಿಯಲ್ಲಿ ಎಷ್ಟು ಕೊಡುತ್ತಾರೋ ಅಷ್ಟು ಎಂಬುದು ಗಮನಾರ್ಹ. ಐಟಿ ಕಂಪೆನಿ ಬಿಟ್ಟು ಕೆಟ್ಟೆವಾ ಎಂಬ ಭಾವನೆ ಅವರಿಗೆ ಬರಬಾರದೆಂಬ ಕಾರಣಕ್ಕೆ ಪ್ರತಿಭಾನ್ವಿತ ಬರಹಗಾರರ ತಿಂಗಳ ಸಂಬಳ 35-40 ಸಾವಿರದಿಂದಲೇ ಆರಂಭವಾಗುತ್ತದೆಯಂತೆ. ಈ ಮೂಲಕ ಅವರು ಖುಷಿಯಿಂದ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ ರಕ್ಷಿತ್. “ನಮ್ಮ ಬರಹಗಾರರು ನಿರಂತರವಾಗಿ ಸ್ಕ್ರಿಪ್ಟ್ ಮಾಡುತ್ತಲೇ ಇರುತ್ತಾರೆ.
ವರ್ಷಕ್ಕೆ ಮೂರ್‍ನಾಲ್ಕು ಸ್ಕ್ರಿಪ್ಟ್ ರೆಡಿಯಾಗಿರಬೇಕು. ಅದರಲ್ಲಿ ಯಾವುದು ಬೆಸ್ಟ್ ಮತ್ತು ಯಾರಿಗೆ ಹೊಂದುತ್ತದೆ ಎಂಬುದನ್ನು ಯೋಚಿಸಿ ಸಿನಿಮಾ ಮಾಡುವ ಉದ್ದೇಶ ನಮ್ಮದು. ಸ್ಕ್ರಿಪ್ಟ್ ಅದ್ಭುತವಾಗಿ ಬಂದರೆ, ಇದನ್ನು ಟ್ರ್ಯಾಕ್ ಮಾಡಬಹುದೆಂಬ ವಿಶ್ವಾಸ ಬಂದರೆ ನಮಗೆ ಸಿನಿಮಾ ಅದ್ಭುತವಾಗಿ ಮಾಡಲು ಗೊತ್ತು. ಹಾಗಾಗಿಯೇ ಬರಹಗಾರರಿಗೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ’ ಎನ್ನುತ್ತಾರೆ ರಕ್ಷಿತ್.