Advertisement

ಶಿಕ್ಷಣಕ್ಕೆ 2 ಕೋಟಿ ವಿನಿಯೋಗಿಸಲು ಚಿಂತನೆ

07:44 PM Jun 24, 2021 | Girisha |

ಮುದ್ದೇಬಿಹಾಳ: ಕೊರೊನಾ ಹೊಡೆತದಿಂದ ಶೈಕ್ಷಣಿಕವಾಗಿ ಸಾಕಷ್ಟು ತೊಂದರೆಯಲ್ಲಿರುವ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಒಂದನೇ ತರಗತಿಯಿಂದ ಪದವಿ ಹಂತದವರೆಗಿನ (1-15) ಎಲ್ಲ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತ ನೋಟ್‌ಬುಕ್‌, ಪಿಯುಸಿಯವರಿಗೆ ಪಠ್ಯಪುಸ್ತಕ ವಿತರಿಸಲು 2 ಕೋಟಿ ರೂ. ಸ್ವಂತದ ಹಣ ಬಳಸಲು ಪುತ್ರ ಭರತಗೌಡ ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಯೋಜನೆ ರೂಪಿಸಿದ್ದೇನೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 2020-21ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಪೂರೈಸಿದ ಟ್ಯಾಬ್‌ಗಳ ಸಾಂಕೇತಿಕ ವಿತರಣೆ, ಐಸಿಟಿಯುಕ್ತ ಸ್ಮಾರ್ಟ್‌ ತರಗತಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳು ತಮ್ಮ ಪಾಲಕರ ಮೇಲೆ ಅವಲಂಬಿತರಾಗದಂತೆ ಮಾಡಲು ಅಗತ್ಯ ಸೌಲಭ್ಯ ಕೊಡಲು ತೀರ್ಮಾನಿಸಿದ್ದೇನೆ. ಒಬ್ಬ ಪಿಯುಸಿ, ಪದವಿ ಹಂತದ ವಿದ್ಯಾರ್ಥಿಗೆ ಕನಿಷ್ಠ 1000 ರೂ. ಮೌಲ್ಯದ ಸೌಲಭ್ಯ ಕೊಡಲು ಸಿದ್ಧತೆ ನಡೆಸಿದ್ದೇನೆ. ಕಳೆದ ವರ್ಷ ಕೊರೊನಾ ಸಂದರ್ಭ 3.5 ಕೋಟಿ ರೂ. ಸ್ವಂತದ ಹಣ ಖರ್ಚು ಮಾಡಿ ಜನರ ನೆರವಿಗೆ ಧಾವಿಸಿದ್ದೆ. ಪ್ರತಿ ವರ್ಷ ದಾಸೋಹ ನಡೆಸುವುದನ್ನು ನಾನು ಪಾಲಿಸುತ್ತಿದ್ದು ಅದನ್ನು ಈಗಲೂ ಮುಂದುವರಿಸುತ್ತೇನೆ ಎಂದರು. ಇಲ್ಲಿನ ಸರ್ಕಾರಿ ಪದವಿ ಕಾಲೇಜಿಗೆ ಹಲವು ಸೌಲಭ್ಯ ತಂದುಕೊಟ್ಟಿದ್ದೇನೆ. ನಾನು ಶಾಸಕನಾದ ಮೇಲೆ ಇದುವರೆಗೆ ಕಟ್ಟಡಕ್ಕಾಗಿ 4 ಕೋಟಿ ರೂ ಅನುದಾನ ಕೊಡಿಸಿದ್ದೇನೆ. ಕುಡಿಯುವ ನೀರಿನ ಸೌಲಭ್ಯವನ್ನು ಶೀಘ್ರ ಅಳವಡಿಸಲಾಗುತ್ತಿದೆ.

ಇನ್ನೇನು ಅವಶ್ಯಕತೆ ಇದೆ ಅನ್ನೋದನ್ನು ಪ್ರಾಂಶುಪಾಲರಿಂದ ಪಡೆದು ದೊರಕಿಸಿಕೊಡುತ್ತೇನೆ. ಸಮವಸ್ತ್ರದ ಬೇಡಿಕೆ ಇದ್ದು ಪರಿಶೀಲಿಸುತ್ತೇನೆ. ಆಡಿಟೋರಿಯಂ ಆರಂಭಗೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್‌ ಕೊಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು. ಪಿಎಸೈ ಎಂ.ಬಿ. ಬಿರಾದಾರ ಮಾತನಾಡಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ವೇದಿಕೆಯಲ್ಲಿದ್ದರು. ಆಯ್ದ 10 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್‌ ಹಸ್ತಾಂತರಿಸಲಾಯಿತು. ಕೊರೊನಾ ನಿಯಮಗಳ ಹಿನ್ನೆಲೆ ವರ್ಚುವಲ್‌ ಸಭೆ ಆಯೋಜಿಸಿದ್ದರಿಂದ ಹಲವು ವಿದ್ಯಾರ್ಥಿಗಳು, ಉಪನ್ಯಾಸಕರು, ಅಧಿ ಕಾರಿಗಳು ಲೈವ್‌ ಆಗಿ ಕಾರ್ಯಕ್ರಮ ವೀಕ್ಷಿಸಲು ಕಾಲೇಜಿನ ಐಸಿಟಿ ವಿಭಾಗದಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಸ್‌.ಎಚ್‌. ಲೊಟಗೇರಿ ವಕೀಲರು, ಸಿದ್ದನಗೌಡ ಪಾಟೀಲ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಸವಿತಾ ಬಿರಾದಾರ ಪ್ರಾರ್ಥಿಸಿದರು. ಡಾ| ಎಚ್‌.ಎಂ. ನಾಟೀಕಾರ ಸ್ವಾಗತಿಸಿದರು. ಪ್ರಾಂಶುಪಾಲ ಡಾ| ಎನ್‌.ಬಿ. ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಪಾತ್ರೋಟ ನಿರೂಪಿಸಿದರು. ಸಿಕಂದರ ಧನ್ನೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next