Advertisement

ಕಲ್ಯಾಣ ಚಾಲುಕ್ಯರ 2 ತಾಮ್ರ ಶಾಸನ ಪತ್ತೆ

06:38 PM Jan 16, 2021 | Team Udayavani |

ಅಂಕೋಲಾ: ಇಲ್ಲಿನ ಕುಂಬಾರಕೇರಿ ಪುರಾತನ ಕದಂಬೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಎರಡು ತಾಮ್ರ ಶಾಸನಗಳು ಪತ್ತೆಯಾಗಿವೆ. ದೇವಾಲಯದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಮಣ್ಣು ಅಗೆಯುವಾಗ ದೊರಕಿದ ಶಾಸನಗಳನ್ನು ಸಮಿತಿ ಅಧ್ಯಕ್ಷ ವಿಠಲರಾವ್‌ ವೆರ್ಣೇಕರ್‌ ಸ್ವತ್ಛಗೊಳಿಸಿ ಶಾಸನಗಳ ಕುರಿತುಅಧ್ಯಯನ ನಡೆಸುತ್ತಿರುವ ಶ್ಯಾಮಸುಂದರ ಗೌಡರ ಗಮನಕ್ಕೆ ತಂದಾಗ, ಇವು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿದ್ದು, ಕ್ರಿಸ್ತಶಕೆ 975ರಲ್ಲಿ ಬರೆಯಲ್ಪಟ್ಟಿದ್ದು ಇಂದಿಗೆ 1046 ವರ್ಷಗಳ ಹಿಂದಿನದ್ದು ಎಂದರು.

Advertisement

ಶಾಸನದಲ್ಲೇನಿದೆ?: ದೊರಕಿದ ಶಾಸನ ಒಂದರಲ್ಲಿ ಕಲ್ಯಾಣ ಚಾಲುಕ್ಯರ ಎರಡನೇ ತೈಲಪರ ಕುರಿತು ಉಲ್ಲೇಖವಿದ್ದು, ಶಾಲಿವಾಹನ ಶಕೆ 897, ಭಾದ್ರಪದ ಮಾಸ, ಆದಿತ್ಯವಾರ, ಅಮಾವಾಸ್ಯೆ ಎಂದು ಬರೆಯಲಾಗಿದ್ದ  ಇದರ ಮುಂದುವರಿದ ಭಾಗದ ತಾಮ್ರ ಶಾಸನ ಬೇರೆ ತಾಮ್ರಪತ್ರದಲ್ಲಿ ಬರೆದಿದ್ದು ಅದು ಪತ್ತೆಯಾಗಬೇಕಿದೆ. ಇಲ್ಲಿ ದೊರೆತ ಇನ್ನೊಂದು ತಾಮ್ರಶಾಸನ ಭಿನ್ನವಾಗಿದ್ದು ಅದರಲ್ಲಿ ಬರೆದಿರುವುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಆದ್ದರಿಂದ ಅದನ್ನು ಸ್ವತ್ಛಗೊಳಿಸಿ ಓದುವುದಾಗಿ ಅವರು ಹೇಳಿದ್ದಾರೆ.

ಕದಂಬೇಶ್ವರಕ್ಕೆ ಚಾಲುಕ್ಯರ ಕೊಡುಗೆ: ಕ್ರಿಸ್ತಶಕೆ 973ರಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆ ಆರಂಭವಾಗಿದ್ದು 1190ರವರೆಗೆ ಮುಂದುವರಿದಿದೆ. ಇದರ ಸಂಸ್ಥಾಪಕ ದೊರೆ ಎರಡನೇ ತೈಲಪ ಕ್ರಿ.ಶ 997ರವರೆಗೆ ಆಳ್ವಿಕೆ ನಡೆಸಿದ ಎಂದು ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತದೆ. ಕದಂಬರಿಂದ ನಿರ್ಮಾಣವಾದ ಕದಂಬೇಶ್ವರ ದೇವಾಲಯವನ್ನು ಕಲ್ಯಾಣ ಚಾಲುಕ್ಯರು ತಮ್ಮ ಶೈಲಿಯಲ್ಲಿ ಅಭಿವೃದ್ಧಿಗೊಳಿಸಿದ್ದರು ಎನ್ನುವುದಕ್ಕೆ ಅವರ ಆಳ್ವಿಕೆಯ ಆರಂಭದ ತಾಮ್ರ ಶಾಸನ ಆಧಾರವಾಗಲಿದೆ.

ಇದನ್ನೂ ಓದಿ:ಪೇಜಾವರ ಶ್ರೀ ಆರಾಧನೋತ್ಸವ

ಕದಂಬೇಶ್ವರ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಐತಿಹಾಸಿಕವಾಗಿ ಅಧ್ಯಯನ ಯೋಗ್ಯವಾಗಿದ್ದು, ಈ ಭಾಗದಲ್ಲಿ ಹಲವು ಶಿಲಾಶಾಸನಗಳಿವೆ. ಪ್ರಥಮವಾಗಿ ಕಲ್ಯಾಣ ಚಾಲುಕ್ಯರ ಕಾಲದ ತಾಮ್ರಶಾಸನ ಪತ್ತೆಯಾಗಿದೆ.

Advertisement

ಶ್ಯಾಮಸುಂದರ ಗೌಡ, ಶಾಸನ ಸಂಶೋಧಕರು

Advertisement

Udayavani is now on Telegram. Click here to join our channel and stay updated with the latest news.

Next