ಕೋಲ್ಕತಾ/ಕಾಠ್ಮಂಡು: ನೇಪಾಳದ ಕಾಂಚನಜುಂಗಾ ಪ್ರಪಂಚದ ಮೂರನೇ ಅತೀ ಎತ್ತರದ ಪರ್ವತವಾಗಿದ್ದು, ಈ ಎತ್ತರದ ಪರ್ವತದ ತುತ್ತತುದಿ ಸಮೀಪ ತೀವ್ರ ಹಿಮ ಹುಣ್ಣಿಗೆ ಒಳಗಾಗಿ ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವನ್ನಪ್ಪಿದ್ದು, ಇಬ್ಬರನ್ನು ಪರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಕಾಂಚನಜುಂಗಾ ಪರ್ವತವನ್ನು ಯಶಸ್ವಿಯಾಗಿ ಏರಿದ್ದ ಇಬ್ಬರು ಬಂಗಾಳಿ ಪರ್ವತಾರೋಹಿಗಳಾದ ರಮೇಶ್ ರಾಯ್ ಹಾಗೂ ರುದ್ರಪ್ರಸಾದ್ ಹಾಲ್ದಾರ್ ಅವರನ್ನು ರಕ್ಷಿಸಿ ಶುಕ್ರವಾರ ಬೆಳಗ್ಗೆ ಕಾಠ್ಮಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದೆ.
ಕಾಂಚನಜುಂಗಾ ಪರ್ವತದ ನಾಲ್ಕನೇ ಶೃಂಗದ(ಸುಮಾರು 26,246 ಅಡಿ ಎತ್ತರ) ಸಮೀಪ ಹಿಮದ ದೃಷ್ಟಿದೋಷ ಹಾಗೂ ದೇಹದ ಉಷ್ಣತೆ ತೀವ್ರ ಕಡಿಮೆಯಾದ ಪರಿಣಾಮ ಪರ್ವತಾರೋಹಿಗಳಾದ ಬಿಪ್ಲಾಬ್ (48ವರ್ಷ) ಮತ್ತು ಕುಂಠಾಲ್ ಕರಾರ್ (46) ಸಾವಿಗೀಡಾಗಿರುವುದಾಗಿ ಶೃಂಗ ಪ್ರೋತ್ಸಾಹಕ ಅಧ್ಯಕ್ಷ ಕೇಶವ್ ಪೌಡಿಯಾಲ್ ತಿಳಿಸಿದ್ದಾರೆ.
ಬಿಪ್ಲಾಬ್ ಬುಧವಾರ ಕಾಂಚನಜುಂಗಾದ ತುದಿಯನ್ನು ಯಶಸ್ವಿಯಾಗಿ ಏರಿದ್ದರು. ಆದರೆ ಕುಂಠಾಲ್ ಶೃಂಗದ ತುದಿ ಏರುವ ಮುನ್ನವೇ ಅನಾರೋಗ್ಯಕ್ಕೀಡಾಗಿದ್ದರು. ಇಬ್ಬರು ಪರ್ವತದ ಶೃಂಗದಿಂದ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಸಚಿವಾಲಯ ತಂಡದ ಸದಸ್ಯೆ ಮೀರಾ ಆಚಾರ್ಯ ಮಾಧ್ಯಮಕ್ಕೆ ವಿವರಿಸಿದ್ದಾರೆ.