Advertisement

ರಸ್ತೆ-ಸೇತುವೆ ದುರಸ್ತಿಗೆ 2.68 ಕೋಟಿ ಬಿಡುಗಡೆ

10:15 AM Aug 18, 2019 | Suhan S |

ಧಾರವಾಡ: ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತ ವರದಿಯನ್ನು ಎಲ್ಲ ಜನಪ್ರತಿನಿಧಿಗಳಿಗೆ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಸ್ವತ್ತುಗಳ ಹಾನಿ ಪರಿಶೀಲನೆ ಹಾಗೂ ಕಾಮಗಾರಿಗಳ ವೀಕ್ಷಣೆಗೆ ತೆರಳುವಾಗ ಆಯಾ ಭಾಗದ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಸರ್ಕಾರಕ್ಕೆ ಮಳೆಹಾನಿ ವರದಿ ಸಲ್ಲಿಸುವಾಗ ನಿಖರವಾದ ವರದಿ ನೀಡಬೇಕು ಎಂದು ಸೂಚಿಸಿದರು.

ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಅಧಿಕಾರಿಗಳು ಜಿಪಂ ಸದಸ್ಯರಿಗೆ ತಮ್ಮ ಕ್ಷೇತ್ರ ವ್ಯಾಪ್ತಿಯಾಗಿರುವ ಸಾರ್ವಜನಿಕ ಸ್ವತ್ತು ಹಾನಿ, ಮನೆಹಾನಿ ಬಗ್ಗೆ ಮತ್ತು ವಿತರಿಸಿದ ಪರಿಹಾರ ಮೊತ್ತದ ಬಗ್ಗೆ ವರದಿ ನೀಡಬೇಕು ಎಂದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸ್ವತಃ ಕ್ಷೇತ್ರ ಭೇಟಿ ಮಾಡಿ ಖಚಿತಪಡಿಸಿಕೊಂಡು ನೀಡಬೇಕು ಎಂದು ಸೂಚಿಸಿದರು.

2.68 ಕೋಟಿ ಬಿಡುಗಡೆ: ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತ ಮನೋಹರ ಮಂಡೊಲಿ ಮಾತನಾಡಿ, ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ತಮ್ಮ ಇಲಾಖೆ ಅಧೀನದ ರಸ್ತೆ-ಸೇತುವೆಗಳು ಸೇರಿದಂತೆ ಅಂದಾಜು 13.29 ಕೋಟಿ ಮೊತ್ತದ ಸ್ವತ್ತು ಹಾನಿ ಆಗಿದೆ. ಜಿಲ್ಲಾಧಿಕಾರಿಗಳು ತುರ್ತು ಕಾಮಗಾರಿಗಾಗಿ 685.34 ಕಿಮೀ ರಸ್ತೆ ಹಾಗೂ ಸೇತುವೆಗಳ ದುರಸ್ತಿಗಾಗಿ 2.68 ಕೋಟಿ ಮೊತ್ತ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

Advertisement

ಕೃಷಿ ಇಲಾಖೆ ಜಂಟಿನಿರ್ದೇಶಕ ಎಸ್‌.ಎಸ್‌. ಆಬೀದ್‌ ಮಾತನಾಡಿ, ಜಿಲ್ಲೆಯಲ್ಲಿ 2.29 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿತ್ತು. ಅತಿ ಮಳೆ ಹಾಗೂ ನೆರೆಯಿಂದಾಗಿ 1.43 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ. ಅಂದಾಜು 98 ಕೋಟಿ ಮೊತ್ತದ ಹಾನಿಯಾಗಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ| ರಾಮಚಂದ್ರ ಕೆ. ಮಡಿವಾಳ ಮಾತನಾಡಿ, ಅತಿ ಮಳೆಯಿಂದಾಗಿ ಜಿಲ್ಲೆಯಲ್ಲಿ 38,367 ಹೆಕ್ಟೇರ್‌ ತೋಟಗಾರಿಕೆ ಬೆಳೆ ನಾಶವಾಗಿದ್ದು, ಸುಮಾರು 26 ಕೋಟಿ ರೂ. ಹಾನಿಯಾಗಿದೆ ಎಂದರು.

ಉಪ ಅರಣ್ಯಸಂರಕ್ಷಣಾಧಿಕಾರಿ ಡಿಸೋಜಾ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ರೈತರಿಗೆ ವಿತರಿಸಲು ವಿವಿಧ ಜಾತಿಯ 4,93,346 ಸಸಿಗಳನ್ನು ಬೆಳೆಸಲಾಗಿತ್ತು. ಅವುಗಳಲ್ಲಿ 3,21,098 ಸಸಿಗಳು ಮಾರಾಟವಾಗಿದ್ದು, 1,21,000 ಸಸಿಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

ಸಭೆಯಲ್ಲಿ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿ ಇಲಾಖಾವಾರು ಮಾಹಿತಿ ಸಲ್ಲಿಸಿದರು. ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚನ್ನಮ್ಮ ಬಸನ್ನಗೌಡರ, ನಿಂಗಪ್ಪ ಘಾಟಿನ, ಕಲ್ಲಪ್ಪ ಪುಡಲಕಟ್ಟಿ ಇದ್ದರು. ಜಿಪಂ ಉಪಕಾರ್ಯದರ್ಶಿ ಎಸ್‌.ಜಿ. ಕೊರವರ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಮುಖ್ಯ ಯೋಜನಾ ಅಧಿಕಾರಿ ದೀಪಕ್‌ ಮಡಿವಾಳರ ವಂದಿಸಿದರು.

ಹೆಕ್ಟೇರ್‌ಗೆ 47 ಸಾವಿರ ರೂ. ಪರಿಹಾರ ವಿತರಣೆಗೆ ಅವಕಾಶ

ಹಳ್ಳ-ಕೆರೆಯ ನೀರು ಉಕ್ಕಿ ಹರಿದು ಪಕ್ಕದ ಜಮೀನುಗಳು ಕೊರೆದಿದ್ದರೆ ಇಲ್ಲವೇ ಬೆಳೆಗಳು ಮಣ್ಣು ಮುಚ್ಚಿದ್ದರೆ ಪರಿಹಾರ ನೀಡಲು ಅವಕಾಶ ಇದೆ. ಈ ಬಗ್ಗೆ ಸಂತ್ರಸ್ತರ ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದ ಜಿಲ್ಲಾ ಪಂಚಾಯತ್‌ ಸಿಇಒ ಡಾ| ಬಿ.ಸಿ. ಸತೀಶ, ಎನ್‌ಡಿಆರ್‌ಎ ಮಾರ್ಗಸೂಚಿಯಲ್ಲಿ 5 ಎಕರೆ ಒಳಗಿನ ರೈತರ ಜಮೀನು ಹಾನಿ ಆಗಿದ್ದರೆ ಅದಕ್ಕೆ ಪ್ರತಿ ಹೆಕ್ಟೇರ್‌ಗೆ 47 ಸಾವಿರ ರೂ. ಪರಿಹಾರ ನೀಡಬಹುದು. ಇದರ ಲಾಭವನ್ನು ಸಂತ್ರಸ್ತರಿಗೆ ಮುಟ್ಟಿಸಿ ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next