Advertisement

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

02:14 AM Sep 18, 2021 | Team Udayavani |

ಹೊಸದಿಲ್ಲಿ/ ಬೆಂಗಳೂರು : ಪ್ರಧಾನಿ ಮೋದಿ ಅವರ ಜನ್ಮದಿನ, ಶುಕ್ರವಾರ ಲಸಿಕೆ ವಿತರಣೆಯಲ್ಲಿ ಭಾರತವು ವಿಶ್ವದಾಖಲೆ  ನಿರ್ಮಾಣ ಮಾಡಿದೆ. ಒಂದೇ ದಿನ 2.50 ಕೋಟಿ ಡೋಸ್‌ ಲಸಿಕೆ ನೀಡುವ ಮೂಲಕ ಈ ದಾಖಲೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

Advertisement

ಶುಕ್ರವಾರ ಬೆಳಗ್ಗೆ ಆರಂಭವಾದ ಲಸಿಕೆ ವಿತರಣೆ ಪ್ರಕ್ರಿಯೆ ರಾತ್ರಿ 12ರ ವೇಳೆಗೆ ಅಂತ್ಯವಾಯಿತು. ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ರಾಜ್ಯಗಳು ಲಸಿಕೆ ವಿತರಣೆಯಲ್ಲಿ ದಾಖಲೆ ನಿರ್ಮಾಣ ಮಾಡಿದವು. ಕರ್ನಾಟಕ 29 ಲಕ್ಷ ಡೋಸ್‌ ಲಸಿಕೆ ನೀಡಿ ದೇಶದಲ್ಲಿ ಮೊದಲ ಸ್ಥಾನ ಗಳಿಸಿತು.

ಗುರಿ ಸಾಧಿಸಿ ದಾಖಲೆ
ಮೋದಿ ಜನ್ಮದಿನವಾದ ಶುಕ್ರವಾರ 2.5 ಕೋಟಿ ಡೋಸ್‌ ಲಸಿಕೆ ನೀಡಲು ಕೇಂದ್ರ ಸರಕಾರ ಗುರಿ ಹಾಕಿಕೊಂಡಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ರಾಜ್ಯಗಳು ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದವು. ಹೆಚ್ಚು ಲಸಿಕೆ ಕೇಂದ್ರಗಳನ್ನು ತೆರೆದಿದ್ದವು. ಇದೇ ಮೊದಲ ಬಾರಿಗೆ ದೇಶದಲ್ಲಿ ದಾಖಲೆಯ 1.10 ಲಕ್ಷ ಲಸಿಕೆ ವಿತರಣೆ ಕೇಂದ್ರಗಳನ್ನು ತೆರೆಯಲಾಗಿತ್ತು. ಜೂನ್‌ ನಲ್ಲಿ ಚೀನ ದಿನವೊಂದರಲ್ಲಿ 2.47 ಕೋಟಿ ಡೋಸ್‌ ಲಸಿಕೆ ನೀಡಿತ್ತು.
ಶುಕ್ರವಾರ ರಾತ್ರಿ ವೇಳೆಗೆ ದೇಶದಲ್ಲಿ 2.50 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. ಈ ಮೂಲಕ ನಿಗದಿಮಾಡಿಕೊಂಡಿದ್ದ ಗುರಿ ಮುಟ್ಟಲಾಗಿದೆ.

ಕರ್ನಾಟಕದಲ್ಲಿ ದಾಖಲೆ
ಮೇಳದಲ್ಲಿ ದೇಶದಲ್ಲಿಯೇ ಅತೀ ಹೆಚ್ಚು, 29 ಲಕ್ಷ ಮಂದಿಗೆ ಲಸಿಕೆ ನೀಡಿದ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ಮೂಲಕ ಲಸಿಕೆ ಡೋಸ್‌ ಪಡೆದವರ ಒಟ್ಟು ಸಂಖ್ಯೆ 5 ಕೋಟಿಗೆ ಏರಿದೆ. ರಾಜ್ಯದಲ್ಲಿ 30 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಲಸಿಕೆ ಮೇಳದಲ್ಲಿ ಹತ್ತು ಪಟ್ಟು ಅಧಿಕ ಮಂದಿಗೆ, ಹಿಂದಿನ ಮೇಳಗಳಿಗೆ ಹೋಲಿಸಿದರೆ ಎರಡೂವರೆ ಪಟ್ಟು ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. 13 ಲಕ್ಷ ಮಂದಿ ಮೊದಲ ಡೋಸ್‌ ಮತ್ತು 16 ಲಕ್ಷ ಮಂದಿ ಎರಡನೇ ಡೋಸ್‌ ಸೇರಿ ಒಟ್ಟು 29 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ 4.8 ಲಕ್ಷ ಮಂದಿಗೆ ಲಸಿಕೆ ನೀಡಿದ್ದು, ದೇಶದಲ್ಲಿಯೇ ಅತೀ ಹೆಚ್ಚು ಮಂದಿಗೆ ಲಸಿಕೆ ನೀಡಿದ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಅಕ್ಟೋಬರ್‌ನಲ್ಲಿ ಝೈಡಸ್‌ ಲಸಿಕೆ ಲಭ್ಯ?
ಬಹುನಿರೀಕ್ಷಿತ ಝೈಡಸ್‌ ಕ್ಯಾಡಿಲಾ ಕೊರೊನಾ ಲಸಿಕೆ ಝೆಡ್‌ವೈಸಿಒ ವಿಡಿ ಇದೇ ಅಕ್ಟೋಬರ್‌ನಲ್ಲಿ ದೇಶದಲ್ಲಿ ಬಳಕೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್‌ನಲ್ಲಿ ಸುಮಾರು 1 ಕೋಟಿ ಲಸಿಕೆಗಳನ್ನು ಬಳಕೆಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದ್ದು, 12ರಿಂದ 17 ವರ್ಷ ವಯಸ್ಸಿನ, ಅನಾರೋಗ್ಯ ಹೊಂದಿರುವ ಎಳೆಯರಿಗೂ ಈ ಲಸಿಕೆ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.

Advertisement

ಸದ್ಯ ವಯಸ್ಕರಿಗೆ ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ಅಥವಾ ಹದಿಹರೆಯದ ವರಿಗೆ ಲಸಿಕೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಪ್ರಸ್ತಾವನೆಯನ್ನು ತಜ್ಞರ ಸಮಿತಿಯೊಂದು ಪರಿಶೀಲಿಸುತ್ತಿದೆ. ತಜ್ಞರ ಒಪ್ಪಿಗೆ ಲಭಿಸಿದರೆ ಮಕ್ಕಳು ಅಥವಾ ಹದಿಹರೆಯದ ವರಿಗೂ ಈ ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ದೇಶದಲ್ಲಿಯೇ ಅತೀ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದೇವೆ. ಒಟ್ಟು ಐದು ಕೋಟಿ ಡೋಸ್‌ ಮೈಲುಗಲ್ಲು ಸಾಧನೆಯಾಗಿದೆ. ಶ್ರಮಿಸಿದ ಆರೋಗ್ಯ ಸಿಬಂದಿಗಳಿಗೆಲ್ಲ ಧನ್ಯವಾದಗಳು.

– ಡಾ| ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next