ಮಂಗಳೂರು: ದುಬಾೖಯಿಂದ ಅಕ್ರಮವಾಗಿ ಚಿನ್ನ ಸಾಗಿಸುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ತಿಂಗಳಲ್ಲಿ 2.19 ಕೋ.ರೂ. ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಮೇ 5ರಿಂದ ಜೂ.5ರ ಅವಧಿಯಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ 3.688 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡು 6 ಮಂದಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಚಿನ್ನವನ್ನು ಅಂಟು ರೂಪದಲ್ಲಿ ದೇಹದ ಭಾಗಗಳಲ್ಲಿ ಬಚ್ಚಿಟ್ಟುಕೊಂಡು ಸಾಗಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಕೆಲವು ಪ್ರಕರಣಗಳಲ್ಲಿ ಚಿನ್ನವನ್ನು ಪೌಡರ್ ರೂಪಕ್ಕೆ ಪರಿವರ್ತಿಸಿ ಬೇರೆ ಬೇರೆ ಸಾಮಗ್ರಿಗಳಲ್ಲಿ ಇಟ್ಟುಕೊಂಡು ಸಾಗಿಸಲು ಯತ್ನಿಸಿರುವುದು ಕಂಡುಬಂದಿದೆ.
2021ರ ಜನವರಿಯಿಂದ ಎ.19ರ ವರೆಗೆ ಕೇವಲ ಎರಡೂವರೆ ತಿಂಗಳಲ್ಲಿ 21 ಕೆ.ಜಿ.ಗೂ ಅಧಿಕ ತೂಕದ ಹಾಗೂ 10 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.
ತಪಾಸಣೆ ಬಿಗಿ
ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದ್ದು ಒಟ್ಟು 20 ಮಂದಿಯ 2 ಕಸ್ಟಮ್ಸ್ ತಂಡ ಕಾರ್ಯಾಚರಿಸುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.