ನವದೆಹಲಿ: 1997ರಲ್ಲಿ ಸಂಭವಿಸಿದ್ದ ಉಪಹಾರ್ ಚಿತ್ರ ಮಂದಿರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಅಸೋಸಿಯೇಶನ್ ಅನ್ಸಾಲ್ ಸಹೋದರರ ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ (ಪರಿಹಾರತ್ಮಕ) ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದ್ದು, ಇದರಿಂದ ಅನ್ಸಾಲ್ ಸಹೋದರರು ಹೆಚ್ಚಿನ ಜೈಲುಶಿಕ್ಷೆಯಿಂದ ಪಾರಾದಂತಾಗಿದೆ.
ಕೈಗಾರಿಕೋದ್ಯಮಿಗಳಾದ ಸುಶೀಲ್ ಮತ್ತು ಗೋಪಾಲ್ ಅನ್ಸಾಲ್ ಒಡೆತನದ ಉಪಹಾರ್ ಸಿನಿಮಾ ಚಿತ್ರಮಂದಿರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ “ಹಿಂದಿ ಸಿನಿಮಾ ಬಾರ್ಡರ್” ವೀಕ್ಷಿಸುತ್ತಿದ್ದ 59 ಮಂದಿ ಪ್ರೇಕ್ಷಕರು ಸಾವನ್ನಪ್ಪಿದ್ದ ಘಟನೆ ನಡೆದಿತ್ತು.
ಉಪಹಾರ್ ಸಿನಿಮಾ ಮಂದಿರ ಅಗ್ನಿ ಅನಾಹುತ ದುರಂತಕ್ಕೆ ಸಂಬಂಧಿಸಿದಂತೆ ಉಪಹಾರ್ ದುರಂತ ಸಂತ್ರಸ್ತರ ಅಸೋಸಿಯೇಶನ್ (ಎವಿಯುಟಿ) ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ, ಜಸ್ಟೀಸ್ ಎನ್ ವಿ ರಮಣ ಮತ್ತು ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಜಾಗೊಳಸಿದೆ.
ನಾವೀಗ ಕ್ಯುರೇಟಿವ್ ಅರ್ಜಿಗಳ ಮೂಲಕ ಹಾಗೂ ಸೂಕ್ತ ದಾಖಲೆಯೊಂದಿಗೆ ಹೋದರೆ. ನಮ್ಮ ಅಭಿಪ್ರಾಯದ ಪ್ರಕಾರ ಯಾವ ಪ್ರಕರಣವನ್ನೂ ನಿರೂಪಿಸಲು ಆಗಲ್ಲ. ಹೀಗಾಗಿ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ಪೀಠ ಆದೇಶದಲ್ಲಿ ತಿಳಿಸಿದೆ.
ಇದು ನಮ್ಮ ಅಂತಿಮ ತೀರ್ಪು, ಉಪಹಾರ್ ಸಿನಿಮಾದ ಮಾಲೀಕರಾದ ಅನ್ಸಾಲ್ ಸಹೋದರರು ಜೈಲಿಗೆ ಹೋಗಬೇಕಾಗಿಲ್ಲ ಎಂದು ತಿಳಿಸಿದೆ. ಉಪಹಾರ್ ಅಗ್ನಿ ದುರಂತದ ಕುರಿತಂತೆ 2015ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಸಂತ್ರಸ್ತರ ಅಸೋಸಿಯೇಶನ್ ಅಧ್ಯಕ್ಷೆ ನೀಲಂ ಕೃಷ್ಣಮೂರ್ತಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಬೇಜವಾಬ್ದಾರಿತನದ ತೋರಿದ ಅನ್ಸಾಲ್ ಸಹೋದರರಿಗೆ ಇನ್ನೂ ಹೆಚ್ಚಿನ ಜೈಲುಶಿಕ್ಷೆ ವಿಧಿಸಬೇಕೆಂದು ಕೋರಿ ಕ್ಯುರೇಟಿವ್ ಅರ್ಜಿ ಸಲ್ಲಿಸಿತ್ತು.
ಉಪಹಾರ್ ಅಗ್ನಿ ದುರಂತ ಪ್ರಕರಣದ ಕುರಿತು ಸುಪ್ರೀಂಕೋರ್ಟ್ 2015ರ ಆಗಸ್ಟ್ ನಲ್ಲಿ ಅನ್ಸಾಲ್ ಸಹೋದರರನ್ನು ಜಾಮೀನಿನ ಮೇಲೆ ಹೊರಬಿಟ್ಟು, ತಲಾ 30 ಕೋಟಿ ರೂಪಾಯಿ ದಂಡ ವಿಧಿಸಿತ್ತು.