Advertisement

1,985 ಮನೆ ಹಾನಿ, 7,618 ಎಕರೆ ಬೆಳೆ ನಾಶ

12:22 PM Aug 17, 2019 | Suhan S |

ಹಾಸನ: ಜಿಲ್ಲೆಯಲ್ಲಿ ಕಳೆದ 15ದಿನಗಳಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ಪ್ರವಾಹದಿಂದ ನಾಲ್ವರು ಮೃತಪಟ್ಟಿದ್ದು, 132 ಹಳ್ಳಿಗಳಲ್ಲಿ ಹಾನಿಯಾಗಿದೆ. ಒಟ್ಟು 1985 ಮನೆಗಳಿಗೆ ಹಾನಿ ಸಂಭವಿಸಿದ್ದು 7618 ಎಕರೆ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

Advertisement

251 ಕೋಟಿ ರೂ. ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂದು ಪ್ರಾಥಮಿಕ ಅಂದಾಜಿನ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ರವಾನಿಸಿದೆ.

ಎಲ್ಲೆಲ್ಲಿ ಎಷ್ಟೆಷ್ಟು?: ಅತಿವೃಷ್ಟಿ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ 132 ಹಳ್ಳಿಗಳು ತೊಂದರೆಗೊಳಗಾಗಿವೆ. ಆಲೂರು ತಾಲೂಕಿನಲ್ಲಿ 2, ಅರಕಲಗೂಡು 25, ಬೇಲೂರು 20, ಚನ್ನರಾಯಪಟ್ಟಣ 8, ಹಾಸನ 25, ಹೊಳೆನರಸೀಪುರ 34, ಸಕಲೇಶಪುರ ತಾಲೂಕಿನಲ್ಲಿ 28 ಹಳ್ಳಿಗಳಿಗೆ ತೊಂದರೆಯಾಗಿದೆ. ನಾಲ್ವರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. 6 ಪ್ರಾಣಿಗಳೂ ಸಾವನ್ನಪ್ಪಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವರದಿಯಲ್ಲಿ ಉಲ್ಲೇಖ: 694 ಜನರನ್ನು ಸ್ಥಳಾಂತರ ಮಾಡಿದ್ದು, 9ಕ್ಕೂ ಹೆಚ್ಚು ತಾತ್ಕಾಲಿಕ ಆಶ್ರಯ ತಾಣಗಳ ವ್ಯವಸ್ಥೆ ಮಾಡಲಾಗಿತ್ತು. ಈಗ 6 ಆಶ್ರಯ ತಾಣಗಳಲ್ಲಿ 337 ನಿರಾಶ್ರಿತರಿಗೆ ಊಟೋಪಚಾರ ಮತ್ತು ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಮುಂದುವರಿದಿದೆ ಎಂದು ಜಿಲ್ಲಾಡಳಿತ ವರದಿಯಲ್ಲಿ ಉಲ್ಲೇಖೀಸಿದೆ.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ 7,618 ಎಕರೆ ಬೆಳೆ ನಾಶವಾಗಿದೆ. ಮುಖ್ಯವಾಗಿ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡು ಮತ್ತು ಹೊಳೆನರಸೀರಪುರದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ತಿಳಿಸಲಾಗಿದೆ.

Advertisement

ಒಟ್ಟು 1985 ಮನೆ ಅತಿವೃಷ್ಟಿಯಿಂದ ಹಾನಿಗೀಡಾಗಿವೆ. ಆ ಪೈಕಿ ಗ್ರಾಮೀಣ ಪ್ರದೇಶದಲ್ಲಿ 1355 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, 237 ಮನೆಳಿಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ನಗರ, ಪಟ್ಟಣ ಪ್ರದೇಶದಲ್ಲಿ 309 ಮನೆ ಭಾಗಶಃ ಹಾನಿಯಾಗಿದ್ದರೆ, 237 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ.

ಜಿಲ್ಲೆಯಲ್ಲಿ ರಸ್ತೆ, ಸೇತುವೆ, ವಿದ್ಯುತ್‌ ಕಂಬಗಳಿಗೂ ಹಾನಿಯಾಗಿದ್ದು, ಜಿಪಂ ವ್ಯಾಪ್ತಿಯ ಇಲಾಖೆಗಳಲ್ಲಿ 101 ಕೋಟಿ ರೂ. ಅಂದಾಜಿನ ಆಸಿ – ಪಾಸ್ತಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ 10 ಕೋಟಿ ರೂ.ಗೂ ಹೆಚ್ಚು ಹಾನಿಯಾಗಿದೆ ಎಂದೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ನೆರೆ ಪ್ರದೇಶಗಳಿಗೆ ಸಂಸದ ಪ್ರಜ್ವಲ್ ಭೇಟಿ:

ಹಾನುಬಾಳ್‌ ಹೋಬಳಿ ದೇವಾಲದಕೆರೆ-ದೇವವೃಂದ ಮಾರ್ಗವಾಗಿ ಮೂಡಿಗೆರೆ ತಾಲೂಕು ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಗುರುವಾರ ಸಂಜೆ ತಾಲೂಕಿನ ಹಾನುಬಾಳು ಹೋಬಳಿ ವ್ಯಾಪ್ತಿಯ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಹಾನುಬಾಳು ಹೋಬಳಿಯ ದೇವಾಲದಕೆರೆ-ದೇವವೃಂದ ಮಾರ್ಗವಾಗಿ ಮೂಡಿಗೆರೆ ತಾಲೂಕು ಸಂಪರ್ಕ ಕಲ್ಪಿಸುವ ರಸ್ತೆ ಕುಸಿತದಿಂದ ಅಪಾಯದ ಅಂಚಿಗೆ ತಲುಪಿದೆ. ಹಾಗೂ ಗದ್ದೆಗಳ ಮೇಲೆ ನೀರು ನಿಂತ ಪರಿಣಾಮ ಬಾಣಲೆ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಭತ್ತ ಬೆಳೆಯಲು ನಾಟಿ ಮಾಡಿದ್ದ ಸಸಿಗಳು ನಾಶವಾಗಿವೆ. ಈ ಮಹಾ ಮಳೆಗೆ ಹಾನುಬಾಳು ಹೋಬಳಿಯ ಇಬ್ಬರು ರೈತರು ನೀರನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಸಕಲೇಶಪುರ ನಗರ ಹಾಗೂ ಗ್ರಾಮೀಣ ಭಾಗಗಳಾದ ಹೆತ್ತೂರು, ಯಸಳೂರು ಮತ್ತು ಹಾನುಬಾಳು ಹೋಬಳಿಗಳಲ್ಲಿ ರಸ್ತೆಗಳು, ಕಾಫಿ, ಮೆಣಸು ಏಲಕ್ಕಿ ಸೇರಿದಂತೆ ಭತ್ತದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹಲವು ಕಡೆ ಭೂ ಕುಸಿತ ಉಂಟಾಗಿದೆ. ಹೀಗಾಗಿ ಸರ್ಕಾರದಿಂದ ತುರ್ತು ಅನುದಾನದಲ್ಲಿ ಕೆಲ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚರ್ಚೆ ನಡೆಸುವೆ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯುವ ಮೊದಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ರ ಸಭೆ ಕರೆದು ಚರ್ಚಿಸಲಾಗುವುದು ಎಂದರು. ಈ ವೇಳೆ ಹೇಮಾವತಿ ಹಿನ್ನಿರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಶವವಾಗಿ ಪತ್ತೆಯಾದ ಬಡ ರೈತ ರಮೇಶ್‌ ಕುಟುಂಬಕ್ಕೆ ಪರಿಹಾರದ ಚೆಕ್‌ ವಿತರಿಸಿ ಸಾಂತ್ವನ ಹೇಳಿದರು.

ಶಾಸಕ ಎಚ್.ಕೆ ಕುಮಾರಸ್ವಾಮಿ, ಜಿಪಂ ಸದಸ್ಯ ಸುಪ್ರದೀಪ್ತ ಯಜಮಾನ್‌, ಉಜ್ಮಾ ರುಜ್ಮಿ, ತಹಶೀಲ್ದಾರ್‌ ರಕ್ಷಿತ್‌, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕಿನಲ್ಲಿ ಮಳೆಯಿಂದ ಸೃಷ್ಟಿಯಾಗಿದ್ದ ನೆರೆಯನ್ನು ತಾಲೂಕು ಆಡಳಿತ ಸಮರ್ಥವಾಗಿ ಎದುರಿಸಿದೆ ಎಂದು ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ ಹೇಳಿದರು.

ತಾಲೂಕಿನಲ್ಲಿ ಆ.4 ರಿಂದ ಸುರಿದ ದಾಖಲೆ ಮಳೆಗೆ ಹಲವು ಅವಘಡ ಸೃಷ್ಟಿಸಿದ್ದು ಇವುಗಳನ್ನೆಲ್ಲಾ ಸಮರ್ಥವಾಗಿ ಎದುರಿಸುವ ಮೂಲಕ ಹೆಚ್ಚಿನ ಅನಾಹುತ ತಡೆಯಲಾಗಿದೆ ಎಂದು ತಿಳಿಸಿದರು.

ಇಬ್ಬರು ಸಾವು: ಒಂದು ವಾರಗಳ ಕಾಲ ಲೋಕೋಪಯೋಗಿ ಇಲಾಖೆ, ಚೆಸ್ಕಾಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅವಿರತವಾಗಿ ಶ್ರಮಿಸಿದ್ದಾರೆ. ತಾಲೂಕಿನಲ್ಲಿ 28 ಗ್ರಾಮಗಳು ನೆರೆಪೀಡಿತಗೊಂಡಿದ್ದು 108 ಮನೆ ಹಾನಿಯಾಗಿವೆ. ಇಬ್ಬರು ವ್ಯಕ್ತಿಗಳು ಹಾಗೂ ನಾಲ್ಕು ಜಾನುವಾರು ಮೃತಪಟ್ಟಿವೆ. ಮನೆ ಕಳೆದುಕೊಂಡವರಿಗೆ ಹಾಗೂ ಪ್ರಾಣ ಹಾನಿಗೆ ತಕ್ಷಣವೇ ಪರಿಹಾರದ ಚೆಕ್‌ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಳೆ ಹಾನಿ ಹೆಚ್ಚುವ ಸಾಧ್ಯತೆ ಇದ್ದು ಇದುವರೆಗೆ ತಾಲೂಕಿನಲ್ಲಿ 3777 ಹೆಕ್ಟೇರ್‌ ವಿವಿಧ ರೀತಿಯ ಬೆಳೆ ನಾಶವಾಗಿರುವ ಬಗ್ಗೆ ವರದಿಯಾಗಿದೆ ಎಂದರು.ಪುನರ್ವಸತಿ ಕೇಂದ್ರ: ತಾಲೂಕಿನಲ್ಲಿ ಮೂರು ಪುನರ್ವಸತಿ ಕೇಂದ್ರ ಆರಂಭಿಸಿದ್ದೇವೆ. ಇದರಲ್ಲಿ ಆನೇಮಹಲ್ ಕಿರಿಯ ಪ್ರಾಥಮಿಕ ಶಾಲೆಯ ಪುನರ್ವಸತಿ ಕೇಂದ್ರದಲ್ಲಿರುವ ಜನ, ತಮ್ಮ ಮನೆಗಳಿಗೆ ತೆರಳಲು ಹೆದರುತ್ತಿದ್ದಾರೆ. ಹೀಗಾಗಿ ಇವರನ್ನು ಪುನರ್ವಸತಿ ಕೇಂದ್ರದಲ್ಲೇ ಮುಂದುವರಿಸಲಾಗುತ್ತಿದೆ. ಇನ್ನುಳಿದ ಎರಡು ಕೇಂದ್ರಗಳನ್ನು ಮುಚ್ಚಲಾಗಿದೆ. ಅಲ್ಲದೆ ನೆರೆ ಪೀಡಿತ 350 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದರು.

ಪರಿಶೀಲನೆ: ಪಟ್ಟಣದ ಹೇಮಾವತಿ ನದಿ ಪಾತ್ರದ ದಾಖಲೆ ಪರಿಶೀಲನೆ ನಡೆಸುವ ಮೂಲಕ ಅನಧಿಕೃತವಾಗಿ ನಿರ್ಮಾಣವಾದ ಕಟ್ಟಡಗಳ ತೆರವಿಗೆ ಸೂಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next