1984ರ ಸಿಖ್ ಹತ್ಯಾಕಾಂಡ ಪ್ರಕರಣದಲ್ಲಿ ದೆಹಲಿಯ ಹೈಕೋರ್ಟ್, ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ನೀಡಿದೆ. ತಡವಾದರೂ, ಈ ತೀರ್ಪಿನಿಂದ ಪೀಡಿತರ ಮನಸ್ಸುಗಳಲ್ಲಿ ಕೊನೆಗೂ ಕಾನೂನಿನ ಬಗ್ಗೆ ವಿಶ್ವಾಸ ಮೂಡಿದಂತಾಗಿದೆ. ಸಜ್ಜನ್ ಕುಮಾರ್‌ಗೆ ಕಠಿಣ ಶಿಕ್ಷೆ ವಿಧಿಸಿರುವ ಈ ತೀರ್ಪು ತನ್ನೊಡಲಲ್ಲಿ ಪ್ರಮುಖ ಸಂದೇಶವನ್ನು ಹೊತ್ತು ನಿಂತಿದೆ. ಆದಾಗ್ಯೂ ದಂಗೆ ಪೀಡಿತ ಪರಿವಾರಗಳಿಗೆ ನ್ಯಾಯ ಸಿಗಲು 34 ವರ್ಷಗಳೇ ಆಗಿರಬಹುದು, ಆದರೆ ಒಬ್ಬ ವ್ಯಕ್ತಿ ಎಷ್ಟೇ ಪ್ರಭಾವಿ ರಾಜಕಾರಣಿಯಾಗಿದ್ದರೂ ಕಾನೂನಿಗಿಂತ ಯಾರೂ ಮೇಲಲ್ಲ ಎನ್ನುವ ಸಂದೇಶವದು. ಸಿಖ್ ವಿರೋಧಿ ದಂಗೆಯಲ್ಲಿ ಸ್ಪಷ್ಟವಾಗಿ ಸಜ್ಜನ್ ಕುಮಾರ್ ಹೆಸರು ಗುರುತಿಸಿಕೊಂಡರೂ ದಶಕಗಳಿಂದ ಈ ವ್ಯಕ್ತಿ ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿ ಬೇರೂರಿದ್ದ, ಕಾಂಗ್ರೆಸ್ ಸಜ್ಜನ್ ಕುಮಾರ್ ವಿಷಯದಲ್ಲಿ ಮೃದು ಧೋರಣೆಯನ್ನೇ ತೋರಿಸುತ್ತಾ ಬಂದಿತ್ತು. 2013ರಲ್ಲಿ ಕೆಳ ನ್ಯಾಯಾಲಯವು ಈ ಪ್ರಕರಣದಿಂದ ಸಜ್ಜನ್ ಕುಮಾರ್‌ನನ್ನು ಖುಲಾಸೆಗೊಳಿಸಿದ ನಂತರವಂತೂ ಕಾಂಗ್ರೆಸ್‌ಗೆ ಸಜ್ಜನ್ ಕುಮಾರ್‌ನನ್ನು ಬಚಾವ್ ಮಾಡುವ ದಾರಿ ಸಿಕ್ಕಂತಾಗಿತ್ತು. ಆದರೆ ದೆಹಲಿ ಹೈರ್ಕೋಟ್ ಇದೆಲ್ಲದಕ್ಕೂ ವಿರಾಮವಿಟ್ಟಿದೆ. ಅಲ್ಲದೇ ಡಿಸೆಂಬರ್ 31ರೊಳಗೆ ಶರಣಾಗತಿ ಆಗಬೇಕೆಂದೂ ಗಡುವು ವಿಧಿಸಿದೆ. ಸಜ್ಜನ್ ಕುಮಾರ್ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಾಗಿದೆ. ಆದಾಗ್ಯೂ ಆತ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಅಲ್ಲಿ ಸೋತನೆಂದರೆ ಜೈಲುವಾಸವೇ ನಿಶ್ಚಿತ.
ಸಿಖ್ ವಿರೋಧಿ ದಂಗೆಗಳ ವೇಳೆ ಆ ಸಮುದಾಯದವರನ್ನು ಹತ್ಯೆ ಮಾಡುವಂತೆ ಗುಂಪುಗಳಿಗೆ ನಿರ್ದೇಶಿಸಿದ-ಪ್ರಚೋದಿಸಿದ ಆರೋಪ ಸಜ್ಜನ್ ಕುಮಾರ್ ಮೇಲಿತ್ತು. ಇಂದಿರಾ ಹತ್ಯೆಯ ತರುವಾಯ ದೆಹಲಿ ಸೇರಿದಂತೆ ದೇಶಾದ್ಯಂತ 8000-17,000ವರೆಗೆ ಸಿಖ್ ಸಮುದಾಯದವರನ್ನು ಹತ್ಯೆ ಮಾಡಲಾಯಿತು ಎಂಬ ಅಂದಾಜಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಕೇವಲ ದೆಹಲಿಯೊಂದರಲ್ಲೇ 2,800 ಸಿಖ್ಬರನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಸಿಖ್ ದಂಗೆ ಆ ಕ್ಷಣಕ್ಕೆ ಭುಗಿಲೆದ್ದ ಕೋಪದ ಪರಿಣಾಮ ವಾಗಿರದೇ ವ್ಯವಸ್ಥಿತ ಹತ್ಯಾಕಾಂಡವಾಗಿತ್ತು. ಮತದಾರರ ಪಟ್ಟಿಯನ್ನು ಹೊರತೆಗೆಸಿ, ಯಾವ್ಯಾವ ಪ್ರದೇಶದಲ್ಲಿ ಸಿಖ್ಬರ ಮನೆಗಳಿವೆ ಎನ್ನುವುದರಿಂದ ಹಿಡಿದು, ಸಿಖ್ಬರ ಮನೆಗಳನ್ನು ಗುರುತಿಸಿ, ಅವರ ಬಾಗಿಲಿನ ಮೇಲೆ ಚಾಕ್‌ಪೀಸ್‌ನಿಂದ ಕ್ರಾಸ್ ಗುರುತು ಹಾಕಲಾಗಿತ್ತು. (ಹತ್ಯೆ ಮಾಡಲು ಬಂದವರಿಗೆ ಸುಲಭವಾಗಿ ಗುರುತು ಸಿಗಲೆಂಬ ಕಾರಣಕ್ಕಾಗಿ!) ಅಂದಿನ ಪ್ರಧಾನಿ ರಾಜೀವ್ ಗಾಂಧಿ “ಆಲದಮರವೊಂದು ಉರುಳಿದಾಗ ಭೂಮಿ ಅಲುಗುತ್ತದೆ’ ಎಂದು ಈ ಹತ್ಯಾಕಾಂಡವನ್ನು ಪರೋಕ್ಷವಾಗಿ ಸಮರ್ಥಿಸಿದ್ದರು. ಈ ದಂಗೆಯಲ್ಲಿ ಕಾಂಗ್ರೆಸ್‌ನ ಅನೇಕ ನಾಯಕರ ಹೆಸರುಗಳು ಕೇಳಿಬಂದವು. ಈಗ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಕಮಲ್‌ನಾಥ್ ಹೆಸರೂ ಕೂಡ ನಾನಾವತಿ ಆಯೋಗದ ವರದಿಯಲ್ಲಿ ಉಲ್ಲೇಖವಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕಮಲ್‌ನಾಥ್‌ರನ್ನು ಈ ಪ್ರಕರಣದಲ್ಲಿ ನಿರ್ದೋಷಿ ಎಂದು ನ್ಯಾಯಾಲಯಗಳು ಹೇಳಿವೆ. ಆದರೆ, ಅವರ ಮೇಲಿನ ಅನುಮಾನದ ತೂಗುಗತ್ತಿ ಇನ್ನೂ ದೂರವಾಗಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ಜಟಿಲತೆಯ ಕಾರಣದಿಂದಾಗಿ ಈ ಪ್ರಕರಣ ಬಹಳ ಕಾಲ ತೆಗೆದುಕೊಂಡಿತು. ಈ ನಿಧಾನಗತಿಯಿಂದಾಗಿ ಆರೋಪಿಗಳು ಲಾಭ ಪಡೆದರೆ, ಪೀಡಿತ ಕುಟುಂಬಗಳ ಅರ್ಧ ಬದುಕು ನ್ಯಾಯದ ನಿರೀಕ್ಷೆಯಲ್ಲೇ ಕಳೆದುಹೋಗಿದೆ.
1984ರ ದಂಗೆಯಿಂದ ಪೀಡಿತರಾದವರು ಸಂಖ್ಯೆ ಅತ್ಯಧಿಕವಿದೆ. ಅನೇಕರು ತಮಗಾದ ಅನ್ಯಾಯದ ವಿರುದ್ಧ ನ್ಯಾಯಾಲಯಗಳ ಮೆಟ್ಟಿಲನ್ನೂ ಏರಿಲ್ಲ. ಎಲ್ಲವನ್ನೂ ಕಳೆದುಕೊಂಡು ಹೊಸ ಬದುಕು ಆರಂಭಿಸಿದವರು, ದಂಗೆಯ ನೋವಲ್ಲೇ ಬದುಕು ಮುಗಿಸಿದವರು, ಇಂದಿಗೂ ಆ ಹತ್ಯಾಕಾಂಡದ ಕರಿನೆರಳಿನಿಂದ ಹೊರಬರಲಾರದೇ ಮಾನಸಿಕ ಅಸಮತೋಲನಕ್ಕೆ ಒಳಗಾದವರು…, ಆರೋಪಿಗಳಿಂದ ಎದುರಾದ ಬೆದರಿಕೆಗಳಿಗೆ ಹೆದರದೇ ಜಟಿಲ ಕಾನೂನು ಪ್ರಕ್ರಿಯೆಯ ವಿಳಂಬದಲ್ಲಿ ಸಂಘರ್ಷವನ್ನು ಮುಂದುವರಿಸುವ ಸಂಕಲ್ಪ ಮಾಡಿದವರು…ಇವರೆಲ್ಲರಿಗೂ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪು ತುಸು ಸಾಂತ್ವನ ನೀಡಿರಲಿಕ್ಕೂ ಸಾಕು. ಆದರೆ, ಇನ್ನೂ ಪೂರ್ಣವಾಗಿ ಸಿಖ್ಬರಿಗೆ ನ್ಯಾಯ ಸಿಕ್ಕಿಲ್ಲ. ಅವರ ನೋವುಗಳಿಗೆ ಸ್ಪಂದನೆ ಸಿಕ್ಕಿಲ್ಲ. ಯಾವ ರೀತಿಯಲ್ಲಿ ಕಾಂಗ್ರೆಸ್ ಸಿಖರ ನೋವುಗಳನ್ನು ಕಡೆಗಣಿಸುತ್ತಾ ಬರುತ್ತಿದೆಯೋ ಅದೂ ಕೂಡ ನಿಜಕ್ಕೂ ಅಸಮಾಧಾನ ಹುಟ್ಟುಹಾಕುವ ಸಂಗತಿಯೇ. ಸಿಖ್ ವಿರೋಧಿ ದಂಗೆಗಳಾಗಲಿ, ಗೋಧೊತ್ತರ ಹಿಂಸಾಚಾರವಿರಲಿ. ಈ ರೀತಿಯ ದಂಗೆಗಳು ನಾಗರಿಕ ಸಮಾಜಕ್ಕೆ ಬಹುದೊಡ್ಡ ಕಳಂಕಗಳಾಗಿವೆ. ಈ ದಂಗೆಗಳ ಪರಿಣಾಮವನ್ನು ಇಂದಿಗೂ ದೇಶ ಎದುರಿಸುತ್ತಿದೆ. ಸಜ್ಜನ್ ಕುಮಾರ್ ಒಬ್ಬನೇ ಅಲ್ಲ, ಎಲ್ಲಾ ಅಪರಾಧಿಗಳಿಗೂ ಶಿಕ್ಷೆಯಾಗಲೇಬೇಕು. ಆದರೆ ನ್ಯಾಯದಾನ ವ್ಯವಸ್ಥೆಯ ನಿಧಾನಗತಿಯನ್ನು ನೋಡಿದರೆ, ಕಟಕಟೆ ಏರುವ ಮುನ್ನವೇ ಇಂಥ ದಂಗೆಗಳಲ್ಲಿನ ಅನೇಕ ಅಪರಾಧಿಗಳು ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರೂ ಆಶ್ಚರ್ಯವಿಲ್ಲ.