Advertisement

1.96 ಲಕ್ಷ ಜನರಿಂದ ಇಷ್ಟಲಿಂಗ ಪೂಜ

08:33 AM Feb 19, 2019 | |

ರಾಯಚೂರು: ಸುಮಾರು 80 ಎಕರೆಗೂ ಅಧಿ ಕ ವಿಶಾಲ ಪ್ರದೇಶದಲ್ಲಿ 1.96 ಲಕ್ಷಕ್ಕೂ ಅಧಿಕ ಜನ ಏಕಕಾಲಕ್ಕೆ ಗಣ ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಶರಣ ಸಂಪ್ರದಾಯವನ್ನು ಸಾರಿ ಹೇಳಿದರು. ಈ ಅಭೂತಪೂರ್ವ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

Advertisement

ದೇವದುರ್ಗ ತಾಲೂಕಿನ ಸುಕ್ಷೇತ್ರ ವೀರಘೋಟದ ಆಸನಕಟ್ಟೆಯಲ್ಲಿ ಶ್ರೀ ಅಡವಿಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 1.96 ಲಕ್ಷ ಗಣ ಇಷ್ಟಲಿಂಗ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಿಂದಲೂ ಆಗಮಿಸಿದ್ದ ಲಕ್ಷಾಂತರ ಭಕ್ತರು ಅಂಗೈಯಲ್ಲಿ ಲಿಂಗ ಹಿಡಿದು ಶಿವಧ್ಯಾನ ಮಾಡಿದರು. ಶ್ರೀಶೈಲ ಜಗದ್ಗುರುಗಳು ಸೇರಿದಂತೆ ನೂರಾರು ಮಠಾಧಿಧೀಶರು, ಸ್ವಾಮೀಜಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಸೋಮವಾರ ಬೆಳಗಿನ ಜಾವ 3 ಗಂಟೆಯಿಂದಲೇ ಪೂಜಾ ಕಾರ್ಯಕ್ಕೆ ಸಿದ್ಧತೆ ನಡೆಸಲಾಯಿತು. ಈ ಪೂಜೆಗೆಂದೇ ಕೃಷ್ಣ ನದಿ ಪಾತ್ರದ ವಿಶಾಲ ಮೈದಾನವನ್ನು ಸಮತಟ್ಟು ಮಾಡಲಾಗಿತ್ತು. ನೆಲಹಾಸು ಹಾಸಿ ಭಕ್ತರಿಗೆ ಅನುವು ಮಾಡಿಕೊಡಲಾಯಿತು. ಸುಮಾರು ಅರ್ಧ ಎಕರೆಗೂ ಅಧಿಕ ಪ್ರದೇಶದಲ್ಲಿ ವೇದಿಕೆ ನಿರ್ಮಿಸಲಾಗಿತ್ತು. 

ಮೂರು ಗಂಟೆಯಿಂದಲೇ ಭಕ್ತರು ತಮ್ಮ ತಮ್ಮ ಸ್ಥಾನಗಳಿಗೆ ಬಂದು ಕುಳಿತರು. ಮೊದಲೇ ತಿಳಿಸಿದಂತೆ ಪ್ರತಿಯೊಬ್ಬ ಭಕ್ತರಿಗೂ ಮಠದಿಂದಲೇ ಲಿಂಗ, ರುದ್ರಾಕ್ಷಿ, ಬಿಲ್ವಪತ್ರೆ, ವಿಭೂತಿ ಹಾಗೂ ಕುಂಕುಮವುಳ್ಳ ಚೀಲಗಳನ್ನು ನೀಡಲಾಯಿತು.

ವೇದಿಕೆಯಲ್ಲಿ ಶ್ರೀಶೈಲ ಜಗದ್ಗುರುಗಳು ಇಷ್ಟಲಿಂಗ ಪೂಜೆ ಮಾಡಿಕೊಂಡು ಭಕ್ತರಿಗೂ ಮಾರ್ಗದರ್ಶನ ನೀಡಿದರು. ಎಲ್ಲ ಭಕ್ತರು ಅವರ ಮಾರ್ಗದರ್ಶನ್ವಯ ಪೂಜೆ ನೆರವೇರಿಸಿದರು. ಈ ವೇಳೆ 101 ಬಾರಿ ಪಂಚಾಕ್ಷರಿ ಮಂತ್ರ ಜಪಿಸಿದರು. ಆಗ ಕೂಗಿದ ಶಿವನಾಮ ಸ್ಮರಣೆ ಘೋಷಣೆ ಮುಗಿಲು ಮುಟ್ಟಿತ್ತು.

Advertisement

ಕುಟುಂಬ ಸಮೇತರಾಗಿ ಆಗಮಿಸಿದ್ದ ಅನೇಕರು ಇಷ್ಟಲಿಂಗ ಪೂಜೆ ನೆರವೇರಿಸಿದರು. ಕೆಲವರು ವಿಜಯಪುರ, ಬೀದರ್‌, ಕಲಬುರಗಿ, ಮಹಾರಾಷ್ಟ್ರದಿಂದಲೂ ಪೂಜೆಗೆ ಆಗಮಿಸಿದ್ದರು. ಲೋಕ ಕಲ್ಯಾಣಾರ್ಥ ಹಮ್ಮಿಕೊಂಡ ಇಂಥ ಕಾರ್ಯಕ್ರಮ ನಡೆಯುವುದೇ ವಿರಳ. ಸುಮಾರು 50 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬಂಥನಾಳ ಸ್ವಾಮೀಜಿ ಈ ಕಾರ್ಯಕ್ರಮ ನಡೆಸಿದ್ದರು. ಈಗ ಪೂಜೆ ನಡೆಯುತ್ತಿದೆ.

ಈ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ ಪಾಲ್ಗೊಂಡಿದ್ದೆವು ಎಂದು ಭಕ್ತರು ಅಭಿಪ್ರಾಯ ಪಟ್ಟರು.   ಸೈನಿಕರಿಗೆ ಶ್ರದ್ಧಾಂಜಲಿ: ಇದೇ ವೇಳೆ ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರಿಗೆ ಲಕ್ಷಾಂತರ ಜನ ಏಕಕಾಲಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ದೇಶದ ಪರ ಘೋಷಣೆ ಕೂಗಲಾಯಿತು. ಇಷ್ಟೊಂದು ಜನ ಏಕಕಾಲಕ್ಕೆ ಶ್ರದ್ಧಾಂಜಲಿ ಸಲ್ಲಿಸುವುದರಿಂದ ಅದರ ಫಲ ಸಿಕ್ಕೇ ಸಿಗುತ್ತದೆ. ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next