Advertisement

ದುಬಾರಿ ಕಾರು ಶೋಕಿ: 3 ಕೋಟಿಗಾಗಿ ಕಿಡ್ನ್ಯಾಪ್‌ ಕಥೆ ಕಟ್ಟಿದ ಯುವಕ!

09:03 AM Apr 04, 2019 | Team Udayavani |

ಗುರ್ಗಾಂವ್‌ : 19 ವರ್ಷದ ಈ ಯುವಕನಿಗೆ ಹೈ ಎಂಡ್‌ ಕಾರುಗಳ ಶೋಕಿ. ಕೇವಲ ಶೋಕಿ ಇದ್ದರೆ ಪರ್ವಾಗಿಲ್ಲ ಆದ್ರೆ ಈತನಿಗೆ ಆ ಹೈ ಎಂಡ್‌ ಕಾರುಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆ. ಆದರೆ ಅದಕ್ಕಾಗಿ ಆತ ಕಂಡುಕೊಂಡಿದ್ದು ಮಾತ್ರ ಕಿಡ್ನ್ಯಾಪ್‌ ಎಂಬ ಶಾರ್ಟ್‌ ಕಟ್‌ ದಾರಿಯನ್ನು. ಹಾಗಂತ ಆತ ಯಾರೋ ಶ್ರೀಮಂತರ ಮನೆ ಹುಡುಗರನ್ನು ಕಿಡ್ನ್ಯಾಪ್‌ ಮಾಡುವ ಪ್ಲ್ರಾನ್‌ ಮಾಡಲಿಲ್ಲ ಬದಲಿಗೆ ತನ್ನನ್ನೇ ತಾನು ಕಿಡ್ನ್ಯಾಪ್‌ ಮಾಡಿಕೊಂಡ ಈ ಭೂಪ. ಹೈ ಎಂಡ್‌ ಕಾರುಗಳ ಕ್ರೇಝನ್ನು ತಲೆಗೆ ಹತ್ತಿಸಿಕೊಂಡಿದ್ದ ಸಂದೀಪ್‌ ಕುಮಾರ್‌ ಎಂಬ 19 ವರ್ಷದ ಯುವಕ ಮಾರ್ಚ್‌ 29ರಂದು ಮನೆಯಿಂದ ಕ್ರಿಕೆಟ್‌ ಅಕಾಡೆಮಿಗೆಂದು ಹೋದವನು ‘ಕಾಣೆ’ಯಾಗಿದ್ದ. ಇತ್ತ ಮಗ ಕಾಣಿಸದೇ ಇದ್ದಾಗ ಕಂಗಾಲಾದ ಮನೆಯವರು ಗುರ್ಗಾಂವ್‌ ಪೊಲೀಸರಿಗೆ ಮಿಸ್ಸಿಂಗ್‌ ಕಂಪ್ಲೇಂಟ್‌ ಕೊಡುತ್ತಾರೆ. ದೂರು ಸ್ವೀಕರಿಸಿ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಸಂದೀಪನ ಸ್ವಯಂ ಮಿಸ್ಸಿಂಗ್‌ ಹುನ್ನಾರದ ಹಿಂಟ್‌ ಸಿಗುತ್ತದೆ.

Advertisement

ಈ ಪುಣ್ಯಾತ್ಮ ಮಾರ್ಚ್‌ 29ರಂದು ತಪ್ಪಿಸಿಕೊಂಡವನು ಚಿಂದಿ ಆಯುವ ವ್ಯಕ್ತಿಯೊಬ್ಬನಿಗೆ 500 ರೂಪಾಯಿಗಳನ್ನು ನೀಡಿ ತನ್ನ ಸಹೋದರನಿಗೆ ಕರೆ ಮಾಡಿಸಿ ‘ಕಿಡ್ನ್ಯಾಪ್‌’ ಆಗಿರುವ ಮಾಹಿತಿಯನ್ನು ನೀಡುತ್ತಾನೆ ಮಾತ್ರವಲ್ಲದೆ ತನ್ನ ಬಿಡುಗಡೆಗೆ 3 ಕೋಟಿ ರೂಪಾಯಿಗಳ ಬೇಡಿಕೆಯನ್ನು ಆತನ ಮೂಲಕ ನೀಡುತ್ತಾನೆ. ಮತ್ತೆ ಕೆಲವು ದಿನಗಳವರೆಗೆ ಸಮೀಪದ ಊರಲ್ಲಿ ತಲೆಮರೆಸಿಕೊಂಡಿರುತ್ತಾನೆ. ಮಾತ್ರವಲ್ಲದೇ ತನ್ನ ಈ ಕಿಡ್ನ್ಯಾಪ್‌ ನಾಟಕವನ್ನು ಸಾಚಾ ಎಂದು ನಂಬಿಸಲು ಸಂದೀಪ್‌ ತನ್ನ ಬೈಕನ್ನು ದೇವಸ್ಥಾನದ ಹತ್ತಿರ ಅನಾಥವಾಗಿ ಬಿಟ್ಟುಹೋಗಿರುತ್ತಾನೆ. ಮತ್ತೆ ಕೆಲವು ದಿನಗಳ ಬಳಿಕ ಗುರ್ಗಾಂವ್‌ ಗೆ ವಾಪಾಸಾದ ಸಂದರ್ಭದಲ್ಲಿ ಸಂಚಾರ ನಿಯಂತ್ರಣ ಪೊಲೀಸರ ಕಣ್ಣಿಗೆ ಬಿದ್ದ ಈತನನ್ನು ಅವರು ಸ್ಥಳೀಯ ಪೊಲೀಸರ ವಶಕ್ಕೊಪ್ಪಿಸುತ್ತಾರೆ. ಬಳಿಕ ಪೊಲೀಸರು ಸಂದೀಪನ ಮನೆಯವರಿಗೆ ಆತನನ್ನು ಹಸ್ತಾಂತರಿಸುವಲ್ಲಿಗೆ ಈ 3 ಕೋಟಿಯ ಕಿಡ್ನ್ಯಾಪ್‌ ಪ್ರಹಸನ ಕೊನೆಗೊಳ್ಳುತ್ತದೆ.

ಇನ್ನು ಪ್ರಾರಂಭದಲ್ಲಿ ಪೊಲೀಸರಿಗೂ ಇದೊಂದು ಕಟ್ಟುಕಥೆ ಎಂದು ಗೊತ್ತಾಗಿರುವುದಿಲ್ಲ. ಸಂದೀಪ್‌ ಪತ್ತೆಯಾದ ಬಳಿಕ ಆತನನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆತ ಕಟ್ಟುಕಥೆಗಳನ್ನು ಹೇಳಿ ಪೊಲೀಸರನ್ನು ನಂಬಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಆತ ಹೇಳುವ ವಿಷಯಕ್ಕೂ ಅಲ್ಲಿನ ಘಟನೆಗಳಿಗೂ ತಾಳೆಯಾಗದೇ ಇದ್ದಾಗ ಪೊಲೀಸರಿಗೆ ಅನುಮಾನ ಕಾಡಲಾರಂಭಿಸುತ್ತದೆ. ಪೊಲೀಸರ ಗದರುವಿಕೆಗೆ ಬೆಚ್ಚಿದ ಯುವಕ ಬಳಿಕ ತಪ್ಪೊಪ್ಪಿಕೊಂಡು ನಿಜಾಂಶವನ್ನು ಬಾಯಿಬಿಡುತ್ತಾನೆ. ‘ತನಗೆ ಕಾರುಗಳ ಶೋಕಿ ಇದ್ದು, ಒಳ್ಳೆಯ ಹೈ ಎಂಡ್‌ ಕಾರನ್ನು ಖರೀದಿಸಬೇಕೆಂಬ ಆಸೆಯಿಂದ ತನ್ನ ಕುಟುಂಬದವರಿಂದ 3 ಕೋಟಿ ಹಣ ಪೀಕಲು ಈ ಕಿಡ್ನ್ಯಾಪ್‌ ನಾಟಕ ಮಾಡಿದೆ’ ಎಂದು ತಪ್ಪೊಪ್ಪಿಕೊಳ್ಳುತ್ತಾನೆ ಸಂದೀಪ.

Advertisement

Udayavani is now on Telegram. Click here to join our channel and stay updated with the latest news.

Next