ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಅರಣ್ಯದಲ್ಲಿ ಕಳೆದ ಒಂದು ವಾರದಿಂದ ನಡೆದ ಹುಲಿ ಗಣತಿ ಪೂರ್ಣಗೊಂಡಿದೆ. ಯೋಜನೆಯ ಎಲ್ಲಾ 13 ವಲಯಗಳ 111 ಬೀಟ್‌ನಲ್ಲಿ ಸುಮಾರು 60 ಸ್ವಯಂ ಸೇವಕರು ಹಾಗೂ 250ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಗಣತಿಯನ್ನು ಯಶಸ್ವಿಯಾಗಿ ಪೂರೈಸಿದರು. ಪ್ರತಿ ದಿನವೂ ಮುಂಜಾನೆ 6ರಿಂದ 10 ಗಂಟೆಯವರೆಗೆ ನಡೆದ ಗಣತಿಯಲ್ಲಿ ಒಂದೊಂದು ತಂಡವು ಕಾಲುನಡಿಗೆಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಗಣತಿ ನಡೆಸಿದವು.
ಈ ಸಂದರ್ಭದಲ್ಲಿ ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು ಅವುಗಳ ಆವಾಸ ಸ್ಥಾನದ ವ್ಯಾಪ್ತಿ ಪತ್ತೆ ಮಾಡಲಾಯಿತು.
ಹೆಜ್ಜೆಯ ಉದ್ದ-ಅಗಲವನ್ನು ಅಳತೆ ಮಾಡಲಾಯಿತು. ಹುಲಿ ಗಣತಿಯೊಂದಿಗೆ ಕಾಡಿನ ಇತರೆ ಪ್ರಾಣಿಗಳಾದ ಆನೆ, ಚಿರತೆ, ಕಾಡಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಗಣತಿದಾರರಿಗೆ ದರ್ಶನ ಕೊಟ್ಟವು.
ಈ ಒಂದು ವಾರದ ಗಣತಿಕಾರ್ಯದಲ್ಲಿ ಒಟ್ಟಾರೆಯಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ 18 ಹುಲಿಗಳು, 8 ಚಿರತೆಗಳು, 5 ಕರಡಿಗಳು, 63 ಕಾಡುನಾಯಿಗಳು, 224 ಆನೆಗಳು, 56 ಕಾಡೆಮ್ಮೆಗಳು, 19 ಕಾಡುಕುರಿ ಹಾಗೂ 15 ಗುಂಪಿನಲ್ಲಿ ಜಿಂಕೆಗಳು ಗಣತಿದಾರರ ಕಣ್ಣಿಗೆ ಬಿದ್ದಿವೆ. ಹುಲಿ ಗಣತಿ ವೇಳೆ ಸ್ವಯಂ ಸೇವಕರು
ಬಹಳ ಪ್ರೀತಿ ಪೂರಕವಾಗಿ, ಬದ್ಧತೆಯಿಂದ ಕಾಡಿನ ನಿಯಮಕ್ಕೆ ಯಾವುದೇ ತೊಂದರೆ ನೀಡದೆ ಗಣತಿ ನಡೆಸಿದರು. ಅವರಿಗೆ ತುಂಬಾ ಅಭಾರಿ ಯಾಗಿದ್ದೇವೆ ಎಂದು ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.
ತಾಯಿ, ಮರಿ ಹುಲಿಗಳ ಹೆಜ್ಜೆ ಗುರುತು ಪತ್ತೆ: 2014ರಲ್ಲಿ ನಡೆಸಿದ್ದ ಹುಲಿ ಗಣತಿಯಲ್ಲಿ ಬಂಡೀಪುರದಲ್ಲಿ 139 ಹುಲಿಗಳು ಇರುವುದು ಖಚಿತವಾಗಿತ್ತು. ಆದರೆ,ಪ್ರತಿನಿತ್ಯವೂ ಸಫಾರಿಗೆ ಹೊರಟವರಿಗೆ ಒಂದಲ್ಲಾ ಒಂದುಕಡೆ ಹುಲಿಗಳು ದರ್ಶನ ನೀಡುತ್ತಿವೆ.
ಅಲ್ಲದೆ ಬಹುತೇಕ ವಲಯಗಳಲ್ಲಿಯೂ ಗಣತಿದಾರರಿಗೂ ನೇರ ದರ್ಶನ ಕೊಟ್ಟಿರುವ ಜೊತೆಗೆ ತಾಯಿ ಮತ್ತು ಮರಿ ಹುಲಿಗಳ ಹೆಜ್ಜೆಯ ಗುರುತುಗಳು ಕಂಡುಬಂದಿವೆ. ಈ ಹುಲಿ ಗಣತಿಯಲ್ಲಿ ಹುಲಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವುದು ಕಂಡು ಬರುತ್ತಿದೆ. ಬಂಡೀಪುರಕ್ಕೆ ಮತ್ತೂಮ್ಮೆ ಮೊದಲಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.