Advertisement

ರಾಜ್ಯದಲ್ಲಿ ಒಂದೇ ದಿನ 18 ಸೋಂಕು

09:15 AM Mar 30, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ.

Advertisement

ಶನಿವಾರ ಸೋಂಕು ದೃಢಪಟ್ಟ ಬಹುತೇಕರಿಗೆ ಕೋವಿಡ್‌ 19 ಸೋಂಕು ತಗುಲಿದ್ದ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದರಿಂದ ಪ್ರಸಾರವಾಗಿದೆ.

ಶನಿವಾರ ಸೋಂಕು ದೃಢವಾದ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಅವರೆಲ್ಲರನ್ನು ಶಂಕಿತರು ಎಂದು ಗುರುತಿಸಿ ಮನೆ ಮತ್ತು ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗುತ್ತಿದೆ.

ಕೋವಿಡ್‌ 19 ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸ್ಥಳೀಯ ಮಟ್ಟದಲ್ಲಿ ಶಂಕಿತರ ತಪಾಸಣೆ ಚರುಕು ಗೊಳಿಸಲು ಅಗತ್ಯ ಮುಂಜಾಗ್ರತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ವಾರದಲ್ಲಿ ಮೂರು ಪಟ್ಟು ಹೆಚ್ಚಳ
ರಾಜ್ಯದಲ್ಲಿ ವಾರದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ರವಿವಾರ (ಮಾ.22)ರಂದು ಸಂಖ್ಯೆ 26 ಆಗಿತ್ತು. ಶನಿವಾರ ಅಂತ್ಯಕ್ಕೆ ಇದು 76ಕ್ಕೆ ಏರಿಕೆಯಾಗಿದೆ.

Advertisement

ಈ ವಾರ ಸೋಂಕಿಗೊಳಗಾದವರ ಪೈಕಿ ಅರ್ಧದಷ್ಟು ಮಂದಿ ಸೋಂಕುಪೀಡಿತರ ನೇರ ಸಂಪರ್ಕ ಹೊಂದಿದವರೇ ಆಗಿದ್ದಾರೆ. ಜತೆಗೆ ವಿದೇಶ ಪ್ರಯಾಣ ಮಾಡಿರದ, ಪೀಡಿತರ ನೇರ ಸಂಪರ್ಕವೂ ಇಲ್ಲದ ಮೈಸೂರಿನ ವ್ಯಕ್ತಿ ಮತ್ತು ದಕ್ಷಿಣ ಕನ್ನಡದ 10 ತಿಂಗಳ ಮಗುವಿನಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕು 3ನೇ ಹಂತ ತಲುಪಿದೆಯೇ ಎಂಬ ಆತಂಕ ಮೂಡಿಸಿದೆ.

ಶಾಲೆಗಳಲ್ಲಿ ದಾಖಲಾತಿ
ಲಾಕ್‌ಡೌನ್‌ ಸೂಚನೆ ನಡುವೆಯೇ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್‌ ಪ್ರವೇಶ ಪ್ರಕ್ರಿಯೆ ಮತ್ತು ವಿದ್ಯಾರ್ಥಿಗಳ ಪಾಲಕರಲ್ಲಿ ಶುಲ್ಕ ಪಾವತಿಗೆ ಒತ್ತಡ ಹೇರುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಗರಂ ಆಗಿದ್ದು, ಯಾವುದೇ ಶಾಲೆ ಸರಕಾರದ ಸೂಚನೆ ಮೀರಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇಂದು ಸರ್ವಪಕ್ಷ ಸಭೆ
ಕೋವಿಡ್‌ 19 ನಿಯಂತ್ರಣ ಹಿನ್ನೆಲೆಯಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಮಾ.29, ರವಿವಾರ ಸಿಎಂ ಬಿಎಸ್‌ವೈ ಸರ್ವಪಕ್ಷಗಳ ಸಭೆ ಕರೆದಿ ದ್ದಾರೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮುಂದಿನ ಕ್ರಮಗಳ ಬಗ್ಗೆ ಸರ್ವಪಕ್ಷ ಮುಖಂಡರ ಜತೆ ಚರ್ಚಿಸಲು ತೀರ್ಮಾನಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ಲಕ್ಷ ಪರೀಕ್ಷೆ ಕಿಟ್‌ ಖರೀದಿಗೆ ಸಿದ್ಧತೆ
ಶೀಘ್ರ ಪರೀಕ್ಷೆ ನಡೆಸಲು 1 ಲಕ್ಷ ಕೋವಿಡ್‌ 19 ಪರೀಕ್ಷೆ ಕಿಟ್‌ ಖರೀದಿಗೆ ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ಮಾತನಾಡಿ, ರಾಜ್ಯದಲ್ಲಿ 82 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೊಂದಿಗೆ 1 ಸಾವಿರ ಮಂದಿ ಸಂಪರ್ಕ ಸಾಧಿಸಿದ್ದಾರೆ. ಈ ಪೈಕಿ ಕಡಿಮೆ ರೋಗನಿರೋಧಕ ಶಕ್ತಿಯುಳ್ಳವರ ಪಟ್ಟಿ ಮಾಡಿ ಹೆಚ್ಚು ಗಮನ ನೀಡಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next