ಮಂಗಳೂರು: ಯುವತಿಯರ ಸರಣಿ ಹಂತಕ ಸಯನೈಡ್ ಮೋಹನ್‌ನ 17ನೇ ಪ್ರಕರಣದ ವಿಚಾರಣೆಯು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದ್ದು, ಆìಒಈಫ ಸಾಬೀತಾಗಿದೆ ಹಾಗೂ ಶಿಕ್ಷೆಯ ಪ್ರಮಾಣ ಅ.24ರಂದು ಪ್ರಕಟವಾಗುವ ಸಾಧ್ಯತೆ ಇದೆ.
ಸಾಬೀತಾದ ಆರೋಪ: ಮೋಹನ್ ವಿರುದ್ಧ ಐಪಿಸಿ ಸೆಕ್ಷನ್ 366 (ಅಪಹರಣ), ಸೆಕ್ಷನ್ 376 (ಅತ್ಯಾಚಾರ) ಸೆಕ್ಷನ್ 302 (ಕೊಲೆ), ಸೆಕ್ಷನ್ 328 (ವಿಷ ಉಣಿಸಿದ್ದು), ಸೆಕ್ಷನ್ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್ 394 (ವಿಷ ಉಣಿಸಿ ಸುಲಿಗೆ), ಸೆಕ್ಷನ್ 417 (ವಂಚನೆ), ಸೆಕ್ಷನ್ 201 (ಸಾಕ್ಷನಾಶ)ದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಮಾನಕ್ಕೆ ಬಂದಿದೆ. ಮೋಹನ್ ವಿರುದ್ಧ ದಾಖಲಾಗಿದ್ದ ಎಲ್ಲ ಆರೋಪ ಈ ಪ್ರಕರಣದಲ್ಲಿ ಸಾಬೀತಾಗಿವೆ.
ಪ್ರಕರಣದ ಹಿನ್ನೆಲೆ: 2005 ಅ. 21ರಂದು ಮೋಹನ್‌ನಿಗೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯ ಪರಿಚಯವಾಗಿತ್ತು. ಅಂಗನವಾಡಿ ಸಭೆ ಹಾಗೂ ವೇತನಕ್ಕಾಗಿ ಬಿ.ಸಿ.ರೋಡ್‌ಗೆ ಬಂದಿದ್ದಾಗ ಆಕೆಯ ಬಳಿ ತನ್ನನ್ನು ಆನಂದ ಎಂದು ಪರಿಚಯಿಸಿದ ಮೋಹನ್ ತಾನು ಆಕೆಯ ಜಾತಿಯವನಾಗಿದ್ದು, ಮದುವೆ ಆಗುವುದಾಗಿ ನಂಬಿಸಿದ್ದ. ಆಕೆಯೊಂದಿಗೆ ಎಲ್ಲಾ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ 2005 ಅ.21ರಂದು ಸಹೋದ್ಯೋಗಿಗಳೊಂದಿಗೆ ಶೃಂಗೇರಿಗೆ ಪಿಕ್‌ನಿಕ್‌ಗೆ ಹೋಗುವುದಾಗಿ ತಿಳಿಸಿ ಬೆಳಗ್ಗೆ ಬಿ.ಸಿ.ರೋಡ್‌ಗೆ ಬಂದ ಆಕೆಯನ್ನು ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ. ಅಲ್ಲಿ ಇಬ್ಬರೂ ಶಬರಿ ಲಾಡ್ಜ್ನಲ್ಲಿ ಕೊಠಡಿ ಪಡೆದು ತಂಗಿದ್ದರು. ರಾತ್ರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ. ಮರುದಿನ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ತಿಳಿಸಿ ಸಯನೈಡ್ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಪ್ಲ್ರಾಟ್ ನಂ.1ರಲ್ಲಿ ಕುಸಿದು ಬಿದ್ದಿದ್ದಳು. ಅಲ್ಲಿದ್ದವರು ತತ್‌ಕ್ಷಣ ಆಕೆಯನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಅ.27ರಂದು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರು ಯಾರೂ ಬಾರದ ಕಾರಣ ಅಲ್ಲಿಯೇ ಅಂತ್ಯ ಕ್ರಿಯೆ ನಡೆಸಲಾಗಿತ್ತು. ಅಲ್ಲಿನ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಸಯನೈಡ್ ಸೇವಿಸಿರುವುದು ದೃಢಪಟ್ಟಿತ್ತು.
ಮೋಹನ್ ಬಳಿಕ ಲಾಡ್ಜ್ಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ. ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ. ಯುವತಿಯ ಮನೆಯವರು ಎಲ್ಲ ಕಡೆ ಹುಡುಕಾಡಿದ್ದರು. ಅಂಗನವಾಡಿ ಸಮಿತಿಯ ಅಧ್ಯಕ್ಷರು ಈಕೆ ವ್ಯಕ್ತಿಯೋರ್ವನ ಜತೆ ಬಸ್‌ಗೆ ಹತ್ತುವುದನ್ನು ನೋಡಿದ್ದರು. ಅ.25ರಂದು ಮನೆಯವರು ಕೊಣಾಜೆ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.
2009 ಸೆ.21ರಂದು ಬಂಧಿತ ಮೋಹನ್ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾಗ ಬಾಳೆಪುಣಿಯ ಯುವತಿಯನ್ನು ಬೆಂಗಳೂರಿನಲ್ಲಿ ಸಯನೈಡ್ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಕೊಣಾಜೆಯ ಅಂದಿನ ಇನ್ಸ್‌ಪೆಕ್ಟರ್ ಲಿಂಗಪ್ಪ ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಬಳಿಕ ಸಿಒಡಿ ಇನ್ಸ್‌ಪೆಕ್ಟರ್ ವಜೀರ್ ಸಾಬ್ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿದುನ್ನೀಸಾ 41 ಸಾಕ್ಷಿ ವಿಚಾರಣೆ ನಡೆಸಿ, 67 ದಾಖಲೆ ಪರಿಗಣಿಸಿ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.