ಧಾರವಾಡ: ಡಯಟ್ದಲ್ಲಿ ನಡೆಸಿದ ಬೆಳಗಾವಿ ವಿಭಾಗದ ಕೌನ್ಸೆಲಿಂಗ್‌ನಲ್ಲಿ 177 ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ಗೆಝೆಟೆಡ್ ಹುದ್ದೆಗೆ ಬಡ್ತಿ ನೀಡಿ ಆದೇಶ ಪತ್ರ ವಿತರಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಆದೇಶ ಪತ್ರ ವಿತರಿಸಿ ಮಾತನಾಡಿ, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದು ಹಾಗೂ ಸಾಮೂಹಿಕ ನಕಲನ್ನು ಪ್ರೋತ್ಸಾಹಿಸುವುದು ಅಪರಾಧವಾಗಿದೆ. ನಕಲು ಮಾಡುವ ಅನಿಷ್ಟ ಪದ್ಧತಿ ತೊಲಗಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ನಿರಂತರ ಶ್ರಮಿಸಬೇಕು ಎಂದು ಹೇಳಿದರು.
ಕಡ್ಡಾಯವಾಗಿ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು ಎಲ್ಲರೂ ಬೋಧಿಸಲೇಕು. ಬಹುಪಾಲು ಮುಖ್ಯ ಶಿಕ್ಷಕರಿಗೆ ಪಠ್ಯಕ್ರಮದ ಪರಿಚಯವೇ ಇಲ್ಲ. ಶಾಲಾ ಮುಖ್ಯಸ್ಥರಾಗಿ ಆಡಳಿತದ ಹೊಣೆಗಾರಿಕೆಯೊಂದಿಗೆ ತಾವೂ ಸಹ ನಿರ್ದಿಷ್ಟ ತರಗತಿಗೆ ಬೋಧನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ಬಡ್ತಿ ಪಡೆದ 177 ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ 10 ದಿನಗಳ ಆಡಳಿತಾತ್ಮಕ ವಿಶೇಷ ತರಬೇತಿ ನೀಡಲಾಗುವುದು. ಸರಕಾರಿ ಪ್ರೌಢಶಾಲೆಗಳು ಉತ್ಕೃಷ್ಟ ಶಿಕ್ಷಣ ನೀಡುವ ಆದರ್ಶ ಶಾಲೆಗಳಾಗಬೇಕು. ಪ್ರೌಢಶಾಲಾ ಮುಖ್ಯಾಧ್ಯಾಪಕ ಹುದ್ದೆಯ ಹಸಿರು ಶಾಹಿ ಸಹಿಗೆ ಅದರದೇ ಆದ ಮಹತ್ವವಿದೆ ಎಂದರು.
ಉಪನಿರ್ದೇಶಕ ಮೃತ್ಯುಂಜಯ ಕುಂದಗೋಳ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿರ್ದೇಶಕ ಅರ್ಜುನ ಕಂಬೋಗಿ, ಇ-ಆಡಳಿತ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ ಇದ್ದರು. ಹುಕ್ಕೇರಿಯ ಶ್ರೀಶೈಲ ಹಿರೇಮಠ ವಂದಿಸಿದರು.