Advertisement

Manipur violence: ಕಳೆದ 4 ತಿಂಗಳಲ್ಲಿ 175 ಮಂದಿ ಸಾವು; 1,100 ಕ್ಕೂ ಹೆಚ್ಚು ಮಂದಿಗೆ ಗಾಯ

07:53 PM Sep 15, 2023 | Team Udayavani |

ಇಂಫಾಲ: ಮಣಿಪುರದಲ್ಲಿ ಮೇ 3 ರಂದು ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 175 ಜನರು ಸಾವನ್ನಪ್ಪಿದ್ದಾರೆ, 1,108 ಮಂದಿ ಗಾಯಗೊಂಡಿದ್ದಾರೆ ಮತ್ತು 33 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ ಐಕೆ ಮುಯಿವಾ ಅವರು,ಮಣಿಪುರದ ಈ ಸವಾಲಿನ ಸಮಯದಲ್ಲಿ, ಪೊಲೀಸರು, ಕೇಂದ್ರ ಪಡೆಗಳು ಮತ್ತು ನಾಗರಿಕ ಆಡಳಿತವು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಹಗಲಿರುಳು ಪ್ರಯತ್ನಿಸುತ್ತಿದೆ ಎಂದು ನಾವು ಸಾರ್ವಜನಿಕರಿಗೆ ಭರವಸೆ ನೀಡುತ್ತೇವೆ ಎಂದರು.

ಹಿಂಸಾಚಾರದ ಸಂದರ್ಭದಲ್ಲಿ ಗಲಭೆಕೋರರು ಪೊಲೀಸರ ಬಳಿಯಿದ್ದ ದೊಡ್ಡ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿಂಸಾಚಾರದಲ್ಲಿ 5,172 ಅಗ್ನಿಸ್ಪರ್ಶ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 4,786 ಮನೆಗಳು ಮತ್ತು 386 ಧಾರ್ಮಿಕ ಸ್ಥಳಗಳು (254 ಚರ್ಚ್‌ಗಳು ಮತ್ತು 132 ದೇವಾಲಯಗಳು) ಸೇರಿವೆ ಎಂದು ಅವರು ಹೇಳಿದರು.

ಪೊಲೀಸರಿಂದ ಒಟ್ಟು 5,668 ಶಸ್ತ್ರಾಸ್ತ್ರಗಳನ್ನು ಲೂಟಿಕೋರರು ದೋಚಿದ್ದಾರೆ. ಈ ಪೈಕಿ 1,329 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ 15,050 ಮದ್ದುಗುಂಡುಗಳು ಮತ್ತು 400 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಭದ್ರತಾ ಪಡೆಗಳು ರಾಜ್ಯದಲ್ಲಿ ಕನಿಷ್ಠ 360 ಅಕ್ರಮ ಬಂಕರ್‌ಗಳನ್ನು ನಾಶಪಡಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊ ಇಖೈಯಿಂದ ಚುರಚಂದಪುರ ಜಿಲ್ಲೆಯ ಕಾಂಗ್‌ವೈವರೆಗಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆರವು ಮಾಡಲಾಗಿದ್ದು , ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಐಜಿಪಿ (ಆಡಳಿತ) ಕೆ ಜಯಂತ ಮಾತನಾಡಿ, ಮೃತಪಟ್ಟ 175 ಜನರ ಪೈಕಿ ಒಂಬತ್ತು ಮಂದಿ ಇನ್ನೂ ಪತ್ತೆಯಾಗಿಲ್ಲ. ಈಪೈಕಿ 79 ಮೃತ ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರ ಕುಟುಂಬಗಳು ಮೃತದೇಹಗಳನ್ನು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. 96 ಮೃತ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ.

ಸದ್ಯ 9,332 ಪ್ರಕರಣಗಳು ದಾಖಲಾಗಿದ್ದು, 325 ಜನರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next