Advertisement
ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ್ ಗಂಗಲ್ ನೇತೃತ್ವದ ತಂಡ ಭಾನುವಾರ ರಾತ್ರಿ ಕೈಗಾರಿಕಾ ಪ್ರದೇಶದ ಗೋದಾಮಿನ ಮೇಲೆ ದಾಳಿ ನಡೆಸಿದಾಗ 330 ಚೀಲ ಅಕ್ಕಿ, 14 ಚೀಲ ಗೋಧಿ ಪತ್ತೆಯಾಗಿದೆ. 2.15 ಲಕ್ಷ ಅಕ್ಕಿ, 6200 ರೂ. ಗೋಧಿ ಸೇರಿದಂತೆ ಒಟ್ಟು 15290 ಕಿಲೋ ಅನ್ನಭಾಗ್ಯ ಧಾನ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಡಿತರಧಾನ್ಯದ ಈ ಅಕ್ರಮ ದಂದೆಕೋರ ಎನ್ನಲಾದ ಆರೋಪಿ ತಾಜುದ್ದೀನ್ ದಾಳಿ ವೇಳೆ ಪರಾರಿಯಾಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಕಾರ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ಪಾಲೀಶ್ ಮಾಡಿ, ನಕಲಿ ಬ್ರಾಂಡ್ ಮುದ್ರಿತವಾದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸಿಪಿಐ ಲಕ್ಷಣ್ ನಾಯ್ಕ, ಪಿಎಸ್‌ಐ ಸಿದ್ದೇಗೌಡ, ಎಎಸ್‌ಐ ಮಾರಣ್ಣ, ಆಹಾರ ನಿರೀಕ್ಷಕ ಯು.ಎಚ್.ರಮೇಶ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ಇದು ಎರಡನೇ ದಾಳಿ
ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಇದೆ ಆರೋಪಿ ತಾಜುದ್ದೀನ್ ಎಂಬಾತನಿಗೆ ಸೇರಿದ್ದೆನ್ನಲಾದ ನಗರದ ಲಕ್ಷ್ಮೀ ಫೌಂಡ್ರಿ ಪಕ್ಕದ ಗೋದಾಮಿನಲ್ಲಿ ದಾಳಿ ನಡೆಸಿ, ಅಂದಾಜು 2.5 ಲಕ್ಷ ಬೆಲೆಯ, 139 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿತ್ತು. ದಾಳಿ ವೇಳೆ ತಾಜುದ್ದೀನ್ ಮತ್ತು ಸೈಯದ್ ನುರಾನ್ ಎಂಬುವರನ್ನು ಬಂದಿಸಲಾಗಿತ್ತಾದರೂ, ಜಾಮೀನಿನ ಮೇಲೆ ಹೊರಬಂದ ಆರೋಪಿ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾನೆ. ಆರೋಪಿಗಳ ಹಿಂದೆ ಹೊರರಾಜ್ಯಗಳಿಗೆ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ ಎಂದು ಹೇಳಲಾಗುತ್ತಿದೆ.