ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಒಂದೇ ದಿನ 17 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ
ಇದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನಲ್ಲಿ 12, ತರೀಕೆರೆ ತಾಲ್ಲೂಕಿನಲ್ಲಿ 3 ಹಾಗೂ ಕಡೂರು ಹಾಗೂ ಚಿಕ್ಕಗಮಗಳೂರು ತಾಲ್ಲೂಕಿನಲ್ಲಿ ಒಬ್ಬರಲ್ಲಿ ಸೋಂಕಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.
ಅಜ್ಜಂಪುರ ತಾಲ್ಲೂಕಿನಲ್ಲಿ ಮದುವೆ ದಲ್ಲಾಳಿಯೊಬ್ಬರು ಯುವಕನೊಬ್ಬನಿಗೆ ಹೆಣ್ಣು ತೋರಿಸಲು ತುಮಕೂರಿಗೆ ಹೋಗಿ ಹಿಂದುರುಗಿದ್ದರು. ಎರಡು ಕುಟುಂಬದ 12 ಮಂದಿಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಪಟ್ಟಣದಲ್ಲಿ ಉಪನ್ಯಾಸಕರೊಬ್ಬರ ಕುಟುಂಬದ ಮೂವರಿಗೆ ಸೋಂಕು ತಗುಲಿರುವುದು ವರದಿಯಿಂದ ತಿಳಿದು ಬಂದಿದೆ.
ಚಿಕ್ಕಮಗಳೂರು ಹಾಗೂ ಕಡೂರು ತಾಲ್ಲೂಕಿನ ತಲಾ ಒಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು, ಇವರಿಬ್ಬರು ಇತ್ತೀಚೆಗೆ ಬೆಂಗಳೂರಿನಿಂದ ಕಡೂರು ಹಾಗೂ ಚಿಕ್ಕಮಗಳೂರಿಗೆ ಹಿಂದಿರುಗಿದ್ದರು. ಸೋಂಕಿತ 17 ಮಂದಿಯನ್ನು ಚಿಕ್ಕಮಗಳೂರು ನಗರದ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸೋಮವಾರ ಪತ್ತೆಯಾದ 17 ಪಾಸಿಟಿವ್ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 42ಕ್ಕೇ ಏರಿಕೆಯಾಗಿದೆ. ಒಂದೇ ದಿನ 17 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಜಿಲ್ಲೆಯ ಜನತೆ ನಿದ್ದೆಗೆಡುವಂತೆ ಮಾಡಿದೆ.
ಕಾಫಿನಾಡಿನಲ್ಲಿ ದಿನಕ್ಕೆ ಒಂದೋ ಎರಡೋ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಸೋಮವಾರ ಒಂದೇ ದಿನ 17 ಪ್ರಕರಣಗಳು ಪತ್ತೆಯಾಗಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ಈ ಹಿಂದೇ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಈಗ ಸ್ಥಳೀಯರಲ್ಲೂ ಮತ್ತು ಅಂತರ್ ಜಿಲ್ಲೆ ಪ್ರವಾಸ ಮಾಡಿದವರಲ್ಲೂ ಸೋಂಕು ಕಂಡು ಬರುತ್ತಿರುವುದು ಜನತೆಯ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.