Advertisement

Lok Sabha Polls: 17 ಕೈ ಅಭ್ಯರ್ಥಿ ಅಂತಿಮ ಇಂದು ಪಟ್ಟಿ ಬಿಡುಗಡೆ; ಪಟ್ಟಿಗೆ ಅಂತಿಮ ಮುದ್ರೆ

01:41 AM Mar 20, 2024 | Team Udayavani |

ಬೆಂಗಳೂರು: ಹಲವು ಬಗೆಯ ಕಸರತ್ತು ಹಾಗೂ ಸಾಕಷ್ಟು ಪೈಪೋಟಿಯ ನಡುವೆಯೂ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ ಬಾಕಿ ಉಳಿಸಿಕೊಂಡಿದ್ದ 21 ಕ್ಷೇತ್ರಗಳ ಪೈಕಿ 17 ಕಡೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರು ಗೊಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

Advertisement

ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಮಂಗಳವಾರ ರಾತ್ರಿ ನಡೆದ ಕೇಂದ್ರ ಚುನಾವಣ ಸಮಿತಿ (ಸಿಇಸಿ)ಯ ಸಭೆಯಲ್ಲಿ ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಹಲವು ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅದರಲ್ಲಿ ಕರ್ನಾಟಕವೂ ಸೇರಿದೆ. ಒಟ್ಟು 28 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 7 ಕಡೆಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಉಳಿದ 21ರಲ್ಲಿ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ತೀವ್ರ ಪೈಪೋಟಿ, ಹಲವು ಕಾರಣಗಳಿಂದ ಗೊಂದಲ ಸೃಷ್ಟಿ ಯಾಗಿರುವ 4 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಭೆಯಲ್ಲಿ ಪಾಲ್ಗೊಂಡರು.

ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ಹಲವು ಸುತ್ತಿನ ಸಮೀಕ್ಷೆ ಹಾಗೂ ವೀಕ್ಷಕರ ಅಭಿಪ್ರಾಯದ ಮೇರೆಗೆ ಸ್ಕ್ರೀನಿಂಗ್‌ ಕಮಿಟಿಯಿಂದ ಶಿಫಾರಸು ಮಾಡಲಾದ “ಏಕ ಹೆಸರು’ ಅಭ್ಯರ್ಥಿಗಳ ಬಗ್ಗೆ ಸವಿವರ ನೀಡಿ ತಮ್ಮ ಶಿಫಾರಸು ಪಟ್ಟಿಯನ್ನು ಸಮರ್ಥಿಸಿಕೊಂಡು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟರೆಂದು ತಿಳಿದುಬಂದಿದೆ. ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಚಿವರು ಹಾಗೂ ಪಕ್ಷದ ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗಿದೆ ಎನ್ನಲಾಗಿದೆ.

ಯಾರ್ಯಾರಿಗೆ ಟಿಕೆಟ್‌ ಸಾಧ್ಯತೆ?
ಕಲಬುರಗಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ಬೀದರ್‌ನಿಂದ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ರಾಯಚೂರಿನಿಂದ ನಿವೃತ್ತ ಐಎಎಸ್‌ ಅಧಿಕಾರಿ ಕುಮಾರ ನಾಯಕ್‌, ದಾವಣಗೆರೆಯಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಹಾಗೂ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ, ಚಿತ್ರದುರ್ಗದಿಂದ ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಕೊನೆಗೂ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರದಿಂದ ರಾಜ್ಯಸಭೆ ಮಾಜಿ ಸದಸ್ಯ ಡಾ| ಎಲ್‌. ಹನುಮಂತಯ್ಯ, ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅಳಿಯನ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿತ್ತು. ಅಂತಿಮವಾಗಿ ರಾಜ್ಯಸಭೆಯ ಟಿಕೆಟ್‌ ತಪ್ಪಿಸಿಕೊಂಡಿದ್ದ ಹನುಮಂತಯ್ಯ ಅವರ ಪರ ಸಿಎಂ, ಡಿಸಿಎಂ ವಕಾಲತ್ತು ವಹಿಸಿದ್ದರಿಂದ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಬೆಂಗಳೂರು ದಕ್ಷಿಣದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಮಾಜಿ ಶಾಸಕ ಸೌಮ್ಯಾ ರೆಡ್ಡಿಗೆ ನಿರೀಕ್ಷೆಯಂತೆ ಟಿಕೆಟ್‌ ದೊರೆತಿದೆ ಎಂದು ತಿಳಿದುಬಂದಿದೆ.

Advertisement

ಬಾಗಲಕೋಟೆಯಿಂದ ಮಾಜಿ ಸಂಸದ ಅಜಯಕುಮಾರ ಸರ್‌ನಾಯಕ್‌ ಹಾಗೂ ಸಚಿವ ಶಿವಾನಂದ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್‌ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಯಾರಿಗೆ ಟಿಕೆಟ್‌ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಕರ್ನಾಟಕದ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಸಿಇಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನಾಳೆ ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಘೋಷಣೆ ಮಾಡುತ್ತೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಂಭವನೀಯ ಅಭ್ಯರ್ಥಿಗಳು

ದಕ್ಷಿಣ ಕನ್ನಡ: ಪದ್ಮರಾಜ್‌
ಉಡುಪಿ- ಚಿಕ್ಕಮಗಳೂರು: ಜಯಪ್ರಕಾಶ್‌ ಹೆಗ್ಡೆ
ಕಲಬುರಗಿ: ರಾಧಾಕೃಷ್ಣ ದೊಡ್ಡಮನಿ
ಬೀದರ್‌: ರಾಜಶೇಖರ ಪಾಟೀಲ್‌ ಹುಮ್ನಾಬಾದ್‌
ರಾಯಚೂರು: ಕುಮಾರ ನಾಯಕ್‌
ಕೊಪ್ಪಳ: ರಾಜಶೇಖರ ಹಿಟ್ನಾಳ್‌
ಬೆಂಗಳೂರು ದಕ್ಷಿಣ: ಸೌಮ್ಯಾ ರೆಡ್ಡಿ
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
ಬೆಂಗಳೂರು ಕೇಂದ್ರ: ನಜೀರ್‌ ಅಹ್ಮದ್‌/
ಮನ್ಸೂರ್‌ ಅಲಿಖಾನ್‌
ಕೋಲಾರ: ಡಾ| ಎಲ್‌. ಹನುಮಂತಯ್ಯ
ಚಿತ್ರದುರ್ಗ: ಬಿ.ಎನ್‌. ಚಂದ್ರಪ್ಪ
ದಾವಣಗೆರೆ: ಡಾ| ಪ್ರಭಾ ಮಲ್ಲಿಕಾರ್ಜುನ
ಚಾಮರಾಜನಗರ: ಸುನಿಲ್‌ ಬೋಸ್‌
ಮೈಸೂರು: ಎಂ. ಲಕ್ಷ್ಮಣ
ಬಾಗಲಕೋಟೆ: ಸಂಯುಕ್ತ ಶಿವಾನಂದ ಪಾಟೀಲ್‌/ಅಜಯಕುಮಾರ ಸರನಾಯಕ್‌
ಬೆಳಗಾವಿ: ಮೃಣಾಲ್‌ ಹೆಬ್ಬಾಳ್ಕರ್‌
ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ

ಬಾಕಿ ಉಳಿದಿರುವುದು
-ಬೆಂಗಳೂರು ಉತ್ತರ
-ಉತ್ತರ ಕನ್ನಡ
-ಹುಬ್ಬಳ್ಳಿ-ಧಾರವಾಡ
-ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next