ನ್ಯೂಜೆರ್ಸಿ: ನ್ಯೂಜೆರ್ಸಿಯ ದೊಡ್ಡ ನರ್ಸಿಂಗ್ ಹೋಮ್‌ಗಳ ಪೈಕಿ ಒಂದಾಗಿರುವ ಆ್ಯಂಡೋವರ್ ಸಬ್‌ಅಕ್ಯೂಟ್ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್‌ನ ಶೆಡ್ಡಿನಲ್ಲಿ ಒಂದು ಶವ ಇದೆ ಎಂದು ಯಾರೋ ಅಜ್ಞಾತ ವ್ಯಕ್ತಿಗಳು ಪೊಲೀಸರಿಗೆ ಫೋನು ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿ ಈ ಶವವನ್ನು ತೆರವುಗೊಳಿಸಿದ ಪೊಲೀಸರಿಗೆ ಆಶ್ಚರ್ಯವೊಂದು ಕಾದಿತ್ತು. ನರ್ಸಿಂಗ್ ಹೋಮ್‌ನ ಚಿಕ್ಕ ಶವಾಗಾರದಲ್ಲಿ ಇನ್ನೂ 17 ಶವಗಳು ರಾಶಿ ಬಿದ್ದಿದ್ದವು. ಅಮೆರಿಕದ ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಹೇಗೆ ಜನರು ಸಾಯುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ.
ಬ್ರಿಟನ್, ಅಮೆರಿಕ ಸಹಿತ ಕೆಲವು ದೇಶಗಳು ಖಾಸಗಿ ನರ್ಸಿಂಗ್ ಹೋಮ್‌ಗಳು ಮತ್ತು ವೃದ್ಧಾಶ್ರಮಗಳಲ್ಲಿ ಸಂಭವಿಸುತ್ತಿರುವ ಸಾವುಗಳ ಲೆಕ್ಕ ಹಿಡಿಯುತ್ತಿಲ್ಲ. ಈ ದೇಶಗಳಲ್ಲಿ ಕೋವಿಡ್ ವೈರಾಣುವಿಗೆ ಬಲಿಯಾದವರ ಸಂಖ್ಯೆ ವರದಿಯಾಗಿರುವುದಕ್ಕಿಂತ ಹೆಚ್ಚು ಇದೆ ಎಂಬ ಆರೋಪ ಮೊದಲಿನಿಂದಲೂ ಇದೆ. ನ್ಯೂಜೆರ್ಸಿಯ ಪ್ರಕರಣ ಇದನ್ನು ಪುಷ್ಟೀಕರಿಸಿದೆ.
ಶವಾಗಾರದಲ್ಲಿ ನಾಲ್ಕು ಶವಗಳನ್ನು ಇಡಲು ಮಾತ್ರ ಸ್ಥಳವಿದೆ. ಆದರೆ 17 ಶವಗಳನ್ನು ಅಲ್ಲಿ ರಾಶಿ ಹಾಕಲಾಗಿತ್ತು. ಶನಿವಾರವೇ ಆಸ್ಪತ್ರೆಯವರು ಶವಗಳನ್ನು ವಿಲೇವಾರಿ ಮಾಡಲು ಶವ ಬ್ಯಾಗುಗಳಿಗೆ ಆರ್ಡರ್ ಮಾಡಿದ್ದರು. ಆದರೆ ಶವ ಬ್ಯಾಗುಗಳ ಕೊರತೆಯಿರುವುದರಿಂದ ಸಕಾಲಕ್ಕೆ ಪೂರೈಕೆಯಾಗಿರಲಿಲ್ಲ. ಹೀಗಾಗಿ ಶವಗಳನ್ನು ಸಣ್ಣ ಶವಾಗಾರದಲ್ಲಿ ರಾಶಿ ಹಾಕಿದ್ದರು. ಈ ನರ್ಸಿಂಗ್ ಹೋಮ್‌ನಲ್ಲಿ ಇತ್ತೀಚೆಗಿನ ದಿನಗಳಲ್ಲಿ 68 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ 26 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಉಳಿದವರ ಸಾವಿನ ಕಾರಣ ಇನ್ನೂ ನಿಗೂಢ.
ನರ್ಸಿಂಗ್ ಹೋಮ್‌ನ ಆಡಳಿತಾಧಿಕಾರಿಯೂ ಸೇರಿದಂತೆ 41 ಸಿಬಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.