Advertisement

ಒಂದೇ ದಿನ 17.94 ಕೋಟಿ ರೂ. ಮದ್ಯ ಮಾರಾಟ!

03:19 PM May 06, 2020 | Suhan S |

ಬೆಳಗಾವಿ: ಬೆಳಗಾವಿ ವಿಭಾಗದಲ್ಲಿ ಮೇ 4ರಂದು ಒಟ್ಟಾರೆ 3,79,757 ಲೀಟರ್‌ ಮದ್ಯ ಹಾಗೂ 99,857 ಲೀಟರ್‌ ಬಿಯರ್‌ ಮಾರಾಟವಾಗಿದ್ದು, ಇದರ ಒಟ್ಟಾರೆ ಅಂದಾಜು ಮೌಲ್ಯ 17.94 ಕೋಟಿ ರೂ. ಎಂದು ಅಬಕಾರಿ ಜಂಟಿ ಆಯುಕ್ತ ಡಾ. ವೈ. ಮಂಜುನಾಥ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಳಗಾವಿ ವಿಭಾಗದಲ್ಲಿ ಕೆ.ಎಸ್‌ .ಬಿ.ಸಿ.ಎಲ್‌ ಡಿಪೋಗಳಲ್ಲಿ ವಿವಿಧ ಬ್ರಾಂಡ್‌ಗಳ ಮದ್ಯದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದೆ ಎಂದು ತಿಳಿಸಿದರು.

ಅಗತ್ಯವಿರುವಷ್ಟು ಮದ್ಯವನ್ನು ಸಿ.ಎಲ್‌-2 ಮತ್ತು ಎಂ.ಎಸ್‌.ಐ.ಎಲ್‌ ಸಂಸ್ಥೆಯ ಸಿಎಲ್‌ 11(ಸಿ) ಮದ್ಯದಂಗಡಿಗಳಿಂದ ಮಾರಾಟ ಮಾಡಲಾಗುವುದು. ಗ್ರಾಹಕರು ಮದ್ಯವನ್ನು ಖರೀದಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮಾಸ್ಕ್ ಧರಿಸದೇ ಇದ್ದಲ್ಲಿ ಅಂತಹ ಗ್ರಾಹಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ. ಜತೆಗೆ ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕಾಗುತ್ತದೆ. ಮದ್ಯದಂಗಡಿಗಳ ಹತ್ತಿರ ಇಡಲಾದ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಉಪಯೋಗಿಸಲು ಮನವಿ ಮಾಡಲಾಗಿದೆ ಎಂದು ಹೇಳಿದರು.

ಸೋಮವಾರ ಮೊದಲ ದಿನ ಮದ್ಯ ಖರೀದಿಸಲು ಇದ್ದಂತಹ ಒತ್ತಡ ಮತ್ತು ಬೇಡಿಕೆ ಮಂಗಳವಾರ ಕಡಿಮೆ ಪ್ರಮಾಣದಲ್ಲಿ ಇತ್ತು. ಗ್ರಾಹಕರು ಮದ್ಯ ದೊರೆಯುವುದಿಲ್ಲವೆಂಬ ಆತಂಕಕ್ಕೆ ಒಳಗಾಗಬಾರದು. ಪ್ರತಿದಿನ ಮದ್ಯ ಮಾರಾಟದ ಸಮಯ ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಇರುತ್ತದೆ. ಮದ್ಯ ಸಿಗುವುದಿಲ್ಲವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದರು.

2.55 ಕೋಟಿ ಮೌಲ್ಯದ ಮದ್ಯ-ಸಾಮಗ್ರಿ ವಶ: ಕೋವಿಡ್‌-19 ನಿಮಿತ್ತ ಜಾರಿಯಾದ ಲಾಕ್‌ ಡೌನ್‌ ಅವಧಿಯಲ್ಲಿ ಮಾ. 24ರಿಂದ ಏ. 3ರ ವರೆಗೆ ಬೆಳಗಾವಿ ವಿಭಾಗ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ 3,340 ಅಬಕಾರಿ ದಾಳಿಗಳನ್ನು ನಡೆಸಿ, 404 ಪ್ರಕರಣಗಳನ್ನು ದಾಖಲಿಸಿ, 185 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 17,887 ಲೀಟರ್‌ ಮದ್ಯ, 106 ಲೀಟರ್‌ ಹೊರರಾಜ್ಯದ ಮದ್ಯ, 14,118 ಬಾಟಲ್‌ ಬಿಯರ್‌, 68 ಲೀಟರ್‌ ಸೇಂದಿ , 80 ಲೀಟರ್‌ ಸಂತ್ರಾ, 98 ಲೀಟರ್‌ ಕಾಜು ಫೆನಿ, 2.5 ಲೀಟರ್‌ ನೀರು ಮಿಶ್ರಿತ ಮದ್ಯ, 3,613 ಲೀ. ಕಳ್ಳಭಟ್ಟಿ ಸಾರಾಯಿ, 4,825 ಲೀ. ಬೆಲ್ಲದ ಕೊಳೆ, 26.84 ಲೀಟರ್‌ ವೈನ್‌ ಹಾಗೂ 268 ದ್ವಿಚಕ್ರ ವಾಹನಗಳು ಹಾಗೂ 16 ನಾಲ್ಕು ಚಕ್ರಗಳ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಡಾ. ವೈ. ಮಂಜುನಾಥ ತಿಳಿಸಿದರು.

Advertisement

ಜಪ್ತಿ ಮಾಡಲಾಗಿರುವ ಎಲ್ಲ ಅಬಕಾರಿ ವಸ್ತುಗಳ ಮೌಲ್ಯ ಹಾಗೂ ಜಪ್ತಿ ಪಡಿಸಿದ ವಾಹನಗಳ ಅಂದಾಜು ಒಟ್ಟು ಮೌಲ್ಯ 2.55 ಕೋಟಿ ರೂ. ಎಂದು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರಾದ ಬಸವರಾಜ ನೇತೃತ್ವದಲ್ಲಿ ಎಲ್ಲ ಅಬಕಾರಿ ಸಿಬ್ಬಂದಿಯವರು ಅತ್ಯುತ್ತಮವಾಗಿ ತನಿಖಾ ಚಟುವಟಿಕೆಗಳನ್ನು ನಿರ್ವಹಿಸಿ ಸಾಕಷ್ಟು ಪ್ರಮಾಣದ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬೆಳಗಾವಿ ವಿಭಾಗದ ಎಲ್ಲ ಅಬಕಾರಿ ಉಪ ಆಯುಕ್ತರು ಹಾಗೂ ಎಲ್ಲ ಅಬಕಾರಿ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next