Advertisement

ಬಿಹಾರದಲ್ಲಿ ಮೈತ್ರಿ 17+17+6 ಹಂಚಿಕೆ

06:00 AM Dec 24, 2018 | |

ನವದೆಹಲಿ: ಬಿಹಾರದ ಎನ್‌ಡಿಎ ಘಟಕದಿಂದ ತಮಗೆ ಬೇಕಾದ ಸ್ಥಾನಗಳನ್ನು ಪಡೆಯುವಲ್ಲಿ ಲೋಕಜನ ಶಕ್ತಿ ಪಕ್ಷದ ನಾಯಕ, ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಯಶಸ್ವಿಯಾಗಿದ್ದಾರೆ. 6 ಲೋಕಸಭೆ ಸ್ಥಾನಗಳ ಜತೆಗೆ 1 ರಾಜ್ಯಸಭೆ ಸ್ಥಾನವನ್ನೂ ಅವರು ಪಡೆದುಕೊಂಡಿದ್ದಾರೆ. ಈ ಮೂಲಕ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಲೋಕಸಭೆ ಚುನಾವಣೆಯ ಸ್ಥಾನ ಹೊಂದಾಣಿಕೆ ಅಂತಿಮವಾಗಿದೆ. ಬಿಜೆಪಿ 17, ಜೆಡಿಯು 17, ಎಲ್‌ಜೆಪಿ 6 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿವೆ.

Advertisement

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಎಲ್‌ಜೆಪಿ ಅಧ್ಯಕ್ಷ ಪಾಸ್ವಾನ್‌ ಜತೆಯಾಗಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಬಿಹಾರದ 40 ಸ್ಥಾನಗಳ ಪೈಕಿ 31ರಲ್ಲಿ ಜಯಗಳಿಸಲಿದೆ ಎಂದು ಅಮಿತ್‌ ಶಾ ಪ್ರತಿಪಾದಿಸಿದ್ದಾರೆ. 2014ರ ಫ‌ಲಿತಾಂಶದಂತೆ ಗೆದ್ದು ಮೋದಿ ಮತ್ತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಎನ್‌ಡಿಎಯ ಇತರ ಮೈತ್ರಿ ಪಕ್ಷಗಳ ಜತೆಗೆ ಮಾತುಕತೆ ನಡೆಸಿ ಸ್ಥಾನ ಹೊಂದಾಣಿಕೆ ಮತ್ತು ಅಭ್ಯರ್ಥಿಗಳ ಆಯ್ಕೆ ಶೀಘ್ರವೇ ನಡೆಸಲಾಗುತ್ತದೆ ಎಂದಿದ್ದಾರೆ. 

ಬಿಹಾರ ಸಿಎಂ ನಿತೀಶ್‌ ಕುಮಾರ್‌  ಮಾತನಾಡಿ  ಮೈತ್ರಿಕೂಟದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿಗೆ ಎಲ್ಲರೂ ಶ್ರಮಿಸುತ್ತೇವೆಎಂದು ಹೇಳಿದ್ದಾರೆ. 40 ಸ್ಥಾನಗಳಲ್ಲಿ 32 ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲಲಿದೆ ಎಂದು ನಿತೀಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಜಿಪುರ ಕ್ಷೇತ್ರದ ಸಂಸದ ಪಾಸ್ವಾನ್‌ರನ್ನು ರಾಜ್ಯಸಭೆಗೆ ಕಳುಹಿಸುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿತೀಶ್‌ ದೇಶಕ್ಕಾಗಿ ಪಾಸ್ವಾನ್‌ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ ಬಿಜೆಪಿಗೆ ಕೃತಜ್ಞತೆ ಸಲ್ಲಿಸಬೇಕು ಎಂದಿದ್ದಾರೆ. 9 ಬಾರಿ ಸಂಸದರಾಗಿರುವ ಪಾಸ್ವಾನ್‌ ಮುಂದಿನ ಚುನಾವಣೆಯಲ್ಲಿ ಕಣಕ್ಕೆ ಇಳಿಯುವುದು ಅಸಂಭವ ಎಂದು ಹೇಳಲಾಗುತ್ತಿದೆ. 

ಈ ಡೀಲ್‌ನಲ್ಲಿ ಜಾಕ್‌ಪಾಟ್‌ ಹೊಡೆದದ್ದು ಪಾಸ್ವಾನ್‌. ಬಿಹಾರದಲ್ಲಿಯೇ 6 ಸ್ಥಾನಗಳ ಜತೆಗೆ ಉತ್ತರ ಪ್ರದೇಶ ಅಥವಾ ಜಾರ್ಖಂಡ್‌ನಿಂದ ಹೆಚ್ಚುವರಿಯಾಗಿ 1 ಸ್ಥಾನ ಪಡೆಯಲಿದ್ದಾರೆ. ಜತೆಗೆ ಪಾಸ್ವಾನ್‌ ರಾಜ್ಯಸಭೆಗೆ ಬಿಹಾರದಿಂದ ಆಯ್ಕೆಯಾಗಲಿದ್ದಾರೆ. 2014ರ ಹಂಚಿಕೆಗೆ ಹೋಲಿಸಿದರೆ ಬಿಜೆಪಿಗೆ 5 ಸ್ಥಾನ ಕಡಿಮೆ. ಹಿಂದಿನ ಚುನಾವಣೆಯಲ್ಲಿ ಪಕ್ಷ 22 ಸ್ಥಾನಗಳನ್ನು ಗೆದ್ದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next