ಕೊರಟಗೆರೆ: ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಮಠದ
16 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಮತ್ತು ಶ್ರೀಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮವು ಜೂ.23 ರ ಗುರುವಾರದಂದು ನಡೆಯಲಿದೆ ಎಂದು ಸಿದ್ದರಬೆಟ್ಟ ಶ್ರೀಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಸಿದ್ದರಬೆಟ್ಟ ಶ್ರೀಮಠದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಸಿದ್ದರಬೆಟ್ಟ ಶ್ರೀಮಠದ ೧೬ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಜೂ21 ರಂದು ಶ್ರೀಮಠ ಮತ್ತು ಜಿಲ್ಲಾಡಳಿತದಿಂದ ಅಂತಾರಾಷ್ಟ್ರೀಯ ಯೋಗಶಿಬಿರ, ಜೂ22 ರಂದು ಪುಸ್ತಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ, 23 ರಂದು ಗುರುವಾರದಂದು ಸಾಮೂಹಿಕ ವಿವಾಹ, ಸಿದ್ದಶ್ರೀ ಪ್ರಶಸ್ತಿ ಪ್ರದಾನ, ಜನಜಾಗೃತಿ ಧರ್ಮ ಸಮಾರಂಭ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ ಎಂದು ಹೇಳಿದರು.
ಜನಜಾಗೃತಿ ಧರ್ಮ ಸಮಾರಂಭದ ದಿವ್ಯಸಾನಿಧ್ಯವನ್ನು ಬಾಳೆಹೊನ್ನೂರು ಶ್ರೀಮಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಚಾರ್ಯ ಭಗವತ್ಪಾದರು ಮತ್ತು ಕೇದಾರ ಪೀಠದ ಶ್ರೀಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ರಾವಲ್ ಪದವಿಭೂಷಿತ ಭೀಮಾಶಂಕರಲಿಂಗ ಶಿವಚಾರ್ಯ ಭಗವತ್ಪಾದಕರು ವಹಿಸಿದ್ದಾರೆ.
ಮಂಜುನಾಥ್‌ಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ
ಸಿದ್ದರಬೆಟ್ಟ ಶ್ರೀಮಠದಿಂದ ಪ್ರತಿವರ್ಷದಂತೆ ಸಾಮಾಜಿಕವಾಗಿ ಉತ್ತಮ ಸೇವೆ ಸಲ್ಲಿಸಿದ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ರನ್ನು ಸಿದ್ದಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಕೊರಟಗೆರೆ ತಾಲೂಕಿನ ಭಕ್ತಾವೃಂದ್ದ ೩ದಿನಗಳ ಕಾಲ ಉಪಸ್ಥಿತ ಇರಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪಪಂ ಸದಸ್ಯ ಪ್ರದೀಪ್‌ಕುಮಾರ್, ಮಾಜಿ ಸದಸ್ಯ ಪವನಕುಮಾರ್, ಹುಲೀಕುಂಟೆ ಗ್ರಾಪಂ ಅಧ್ಯಕ್ಷ ಮಲ್ಲಣ್ಣ, ಮುಖಂಡರಾದ ಸಿದ್ದಮಲ್ಲಪ್ಪ, ಚಂದ್ರಕಲಾ, ಸದಾಶಿವಯ್ಯ, ಸಿದ್ದಗಿರಿ ನಂಜುಂಡಸ್ವಾಮಿ, ಪರ್ವತಯ್ಯ, ನಟರಾಜು, ಗಿರೀಶ್, ಮಂಜುನಾಥ ಸೇರಿದಂತೆ ಇತರರು ಇದ್ದರು.