Advertisement

“ಗುರಿ’ತೋರಲು “ಗುರು’ವಿಲ್ಲ ! ಸ.ಪ್ರ.ದ. ಕಾಲೇಜು: 1,692 ಬೋಧಕರ ಹುದ್ದೆ ಖಾಲಿ

01:30 AM Jan 09, 2022 | Team Udayavani |

ಮಂಗಳೂರು: ಒಂದೆಡೆ ರಾಷ್ಟ್ರೀಯಶಿಕ್ಷಣ ನೀತಿ, ಮತ್ತೊಂದೆಡೆ ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕಾರ; ಇಂತಹ ಸವಾಲಿನ ಮಧ್ಯೆಯೇ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ನಡೆಸಲು ರಾಜ್ಯದಲ್ಲಿ ಬೋಧಕರ ಕೊರತೆ ಬಹುವಾಗಿ ಕಾಡುತ್ತಿದೆ.

Advertisement

ರಾಜ್ಯದ ಸ.ಪ್ರ.ದ. ಕಾಲೇಜುಗಳಲ್ಲಿ 7,604 ಮಂಜೂರಾದ ಬೋಧಕರ ಹುದ್ದೆಗಳ ಪೈಕಿ ಸದ್ಯ 5,912 ಮಂದಿ ಕರ್ತವ್ಯ ನಿರತರಾಗಿದ್ದಾರೆ. 1,692 ಹುದ್ದೆಗಳು ಖಾಲಿಯಿವೆ.

ಬೆಂಗಳೂರು ನಗರ ದಲ್ಲಿ ಒಟ್ಟು 820 ಮಂಜೂರು ಹುದ್ದೆಗಳ ಪೈಕಿ 196, ಮೈಸೂರಿನಲ್ಲಿ 587 ಹುದ್ದೆ
ಗಳ ಪೈಕಿ 108, ಹಾಸನದಲ್ಲಿ 422 ಹುದ್ದೆಗಳ ಪೈಕಿ 101, ಬಾಗಲಕೋಟೆಯಲ್ಲಿ 210 ಹುದ್ದೆಗಳ ಪೈಕಿ 81 ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ.

ರಾಜ್ಯದಲ್ಲಿ ಎನ್‌ಇಪಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ವಿಷಯವಾರು ಬೋಧಕರನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏರಿಕೆ ಮಾಡುವ ಅನಿವಾರ್ಯ ಇದೆ. ಆದರೆ ಏರಿಕೆಗಿಂತಲೂ ಈಗಾಗಲೇ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆಯೇ ಸರಕಾರ ಗಮನಹರಿಸದಿರುವುದು ಶೋಚನೀಯ ಎಂದು ಉಪನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಭಾರ ಹಂಚಿಕೆ
ಸರಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಗೆ ಅನುಗುಣವಾಗಿ ಉಂಟಾಗುವ ಕಾರ್ಯಭಾರ ವನ್ನು ಮೊದಲು ಆಯಾ ಕಾಲೇಜಿನ ಖಾಯಂ ಅಧ್ಯಾಪಕರಿಗೆ ಹಂಚಿಕೆ ಮಾಡಿ ನಿಭಾವಣೆಗೆ ಆದ್ಯತೆ ನೀಡಲಾಗಿದೆ. ಬಳಿಕ ಉಳಿಕೆಯಾಗುವ ಕಾರ್ಯಭಾರಕ್ಕೆ ಆಯಾ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಿ ತಾತ್ಕಾಲಿಕವಾಗಿ ಕಲಾ ಹಾಗೂ ವಾಣಿಜ್ಯ ವಿಷಯಕ್ಕೆ ವಾರಕ್ಕೆ ಗರಿಷ್ಠ 8 ಗಂಟೆ ಹಾಗೂ ವಿಜ್ಞಾನ ವಿಷಯಕ್ಕೆ 10 ಗಂಟೆಗಳ ಕಾರ್ಯಭಾರಕ್ಕೆ ಒಬ್ಬರಂತೆ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವುದು ಸರಕಾರ ಯೋಚನೆ. ಆದರೆ ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕಾರ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಬಿದ್ದಿದೆ.

Advertisement

ಬಹುತೇಕ ಸರಕಾರಿ ಕಾಲೇಜುಗಳಲ್ಲಿ ಬೋಧಕರ ಕೊರತೆಯ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್‌ ಇತ್ತೀಚೆಗೆ ವಿಧಾನಸಭೆಯಲ್ಲಿ ಸರಕಾರದ ಗಮನಸೆಳೆದಿದ್ದರು.

ಕರಾವಳಿಯಲ್ಲಿ 143
ಬೋಧಕರ ಹುದ್ದೆ ಖಾಲಿ
ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು 265 ಮಂಜೂರು ಹುದ್ದೆಗಳಿದ್ದರೆ 221 ಭರ್ತಿಯಾಗಿದ್ದು 44 ಖಾಲಿಯಿವೆ. ಉಡುಪಿ ಜಿಲ್ಲೆಯಲ್ಲಿ 238 ಮಂಜೂರು ಹುದ್ದೆಗಳ ಪೈಕಿ 199 ಮಂದಿ ಕರ್ತವ್ಯದಲ್ಲಿದ್ದರೆ 39 ಹುದ್ದೆಗಳು ಖಾಲಿ ಇವೆ. ಇನ್ನು ಉತ್ತರ ಕನ್ನಡದಲ್ಲಿ 247 ಹುದ್ದೆಗಳ ಪೈಕಿ 60 ಖಾಲಿಯಿವೆ.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,692 ಹುದ್ದೆಗಳ ಪೈಕಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಾವಳಿ ರಚಿಸಲಾಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
– ಡಾ| ಸಿ.ಎನ್‌. ಅಶ್ವತ್ಥನಾರಾಯಣ,
ಸಚಿವರು, ಉನ್ನತ ಶಿಕ್ಷಣ ಇಲಾಖೆ

-ದಿನೇಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next