ನವದೆಹಲಿ: ಭಾರತದಲ್ಲಿ ಕಳೆದ ಎರಡು ದಶಕದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಅಪರಾಧಿಗಳಿಗೆ 2022ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. 2022ರಲ್ಲಿ 165 ಅಪರಾಧಿಗಳು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.
2022ರ ವಾರ್ಷಿಕ ಗಲ್ಲು ಶಿಕ್ಷೆ ವರದಿ ಪ್ರಕಾರ, ಕಾರಾಗೃಹಗಳಲ್ಲಿ 2021ರಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ 490 ಕೈದಿಗಳು ಇದ್ದರು. 2022ರಲ್ಲಿ ಈ ಸಂಖ್ಯೆ 539ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ವರದಿ ಪ್ರಕಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಿನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರಾಜೆಕ್ಟ್ 39ಎ ಈ ವರದಿಯನ್ನು ಪ್ರಕಟಿಸಿದೆ.
ವರದಿಯ ಪ್ರಕಾರ, ವಿಚಾರಣಾ ನ್ಯಾಯಾಲಯಗಳಲ್ಲಿ ಶೇ. 98.3ರಷ್ಟು ಮರಣದಂಡನೆ ಪ್ರಕರಣಗಳ ತೀರ್ಪು ನೀಡಲಾಗಿದೆ. ಹೈಕೋರ್ಟ್‌ಗಳಲ್ಲಿ 63 ಪ್ರಕರಣಗಳು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ 11 ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿದೆ.
2022ರ ವೇಳೆಗೆ ಗಲ್ಲು ಶಿಕ್ಷೆಗೆ ಗುರಿಯಾದ 539 ಕೈದಿಗಳು ಕಾರಾಗೃಹಗಳಲ್ಲಿ ಇದ್ದಾರೆ.ರಾಜ್ಯವಾರು ಗಮನಿಸಿದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಪ್ರದೇಶದ 100 ಕೈದಿಗಳು, ಗುಜರಾತ್‌ನ 61 ಕೈದಿಗಳು ಮತ್ತು ಜಾರ್ಖಂಡ್‌ನ 46 ಕೈದಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.