Advertisement

ಬಿಪಿಎಲ್‌ ಕಾರ್ಡ್‌ಗಳಿಗೆ 16.35 ಲಕ್ಷ ಹೊಸ ಅರ್ಜಿ

11:11 AM Aug 30, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್‌ ಕಾರ್ಡ್‌ಗಳಿಗಾಗಿ 16.35 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಸೆಪ್ಟೆಂಬರ್‌ ಅಂತ್ಯದೊಳಗೆ ವಿಲೇವಾರಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ. 

Advertisement

ವಿಕಾಸ ಸೌಧದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತ ನಾಡಿದ ಅವರು, 16.35 ಲಕ್ಷ ಅರ್ಜಿಗಳ ಪೈಕಿ 11.84 ಲಕ್ಷ ಅರ್ಜಿಗಳ ಪರಿಶೀಲನಾ ಕಾರ್ಯ ಮುಗಿದಿದೆ. 6.50 ಅರ್ಜಿಗಳ ಡಾಟಾ ಎಂಟ್ರಿ ಸಹ ಪೂರ್ಣಗೊಂಡಿದೆ. ಸೆಪ್ಟೆಂಬರ್‌ 20 ರಿಂದ ಕಾರ್ಡ್‌ಗಳ ಮುದ್ರಣ ಕಾರ್ಯ ಪ್ರಾರಂಭವಾಗಲಿದ್ದು, 30ರೊಳಗೆ ಮನೆ ಬಾಗಿಲಿಗೆ ಕಾರ್ಡ್‌ ತಲುಪಲಿದೆ. ರಾಜ್ಯದಲ್ಲಿ ಪ್ರಸ್ತುತ 1.10 ಕೋಟಿ ಬಿಪಿಎಲ್‌ ಕಾರ್ಡ್‌ಗಳಿದ್ದು ಹೊಸದಾಗಿ 16.50 ಲಕ್ಷ ಸೇರ್ಪಡೆಯಾಗಲಿವೆ. ಅದೇ ರೀತಿ 28 ಲಕ್ಷ ಎಪಿಎಲ್‌ ಕಾರ್ಡ್‌ಗಳಿದ್ದು ಹೊಸದಾಗಿ ಒಂದು ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ಅಷ್ಟೂ ಕಾರ್ಡ್‌ ವಿತರಣೆಯಾಗಿದೆ ಎಂದು ವಿವರಿಸಿದರು.

ಕಂದಾಯ ಹಾಗೂ ಆಹಾರ ಇಲಾಖೆ ಜತೆಗೂಡಿ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಂಡಿದ್ದು, ಕಾರ್ಡ್‌ ವಿತರಣೆಗೆ ಯಾವುದೇ ರೀತಿಯಲ್ಲಿ ವಿಳಂಬವಾಗದಂತೆ ಎಚ್ಚರಿಕೆ ವಹಿಸಿ, ಹೆಚ್ಚುವರಿ ಸಿಬ್ಬಂದಿ ಸಹ ನಿಯೋಜಿಸಲಾಗಿದೆ ಎಂದರು. ಕ್ಯಾನ್ಸರ್‌, ಹೃದ್ರೋಗ ಸೇರಿದಂತೆ ಕಾಯಿಲೆ ಇದ್ದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್‌ ಕಾರ್ಡ್‌ ಕಡ್ಡಾಯ. ತುರ್ತಾಗಿ ಕಾರ್ಡ್‌ ಬೇಕಾದರೆ ಆಹಾರ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಹೋಗಿ ಆದಾಯ ಪ್ರಮಾಣ ಪತ್ರ ಕೊಟ್ಟು ತಕ್ಷಣ ಪಡೆಯಬಹುದಾಗಿದೆ. ರಾಜ್ಯದಲ್ಲಿರುವ 20,412 ಪಡಿತರ ವಿತರಣೆ ಮಳಿಗೆಗಳಿಗೆ ಪಾಯಿಂಟ್‌ ಆಫ್ ಸೇಲ್‌ ಯಂತ್ರ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಒಂದೊಮ್ಮೆ ಯಂತ್ರ ಅಳವಡಿಕೆ ಮಾಡಿಕೊಳ್ಳದಿದ್ದರೆ ಅಂತಹ ಭಾಗದಲ್ಲಿ ಕೂಪನ್‌ ವ್ಯವಸ್ಥೆ ಜಾರಿಗೊಳಿಸಲಾಗುವುದು. ಕಮೀಷನ್‌ ಕಡಿತ ಸಹ ಮಾಡಲಾಗುವುದು ಎಂದು ಹೇಳಿದರು.

ಪಾಯಿಂಟ್‌ ಆಫ್ ಸೇಲ್‌ ಯಂತ್ರಕ್ಕೆ 15 ರಿಂದ 20 ಸಾವಿರ ರೂ.ಆಗಲಿದೆ. ಅದನ್ನು ಅಳವಡಿಸಿಕೊಳ್ಳಲು ಇಂಟರ್‌ ನೆಟ್‌ ಸಮಸ್ಯೆ ಇದೆ ಎಂದಾದರೆ ಇಲಾಖೆಯ ತಂತ್ರಜ್ಞರು ಹೋಗಿ ವ್ಯವಸ್ಥೆ ಮಾಡಿಕೊಡಲಿದ್ದಾರೆ. ಸಮಸ್ಯೆ ಇಲ್ಲದಿದ್ದರೂ ಅಳವಡಿಸಿಕೊಳ್ಳಲು ನಿರಾಕರಿಸಿದರೆ ಅದು ಬೇಕಂತಲೇ ದುರುಪಯೋಗಕ್ಕಾಗಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬ್ಯಾಗ್‌ನಲ್ಲಿ ಪಡಿತರ
ಕಾರ್ಡ್‌ದಾರರಿಗೆ ಬ್ಯಾಗ್‌ನಲ್ಲೇ ಪಡಿತರ ಕೊಡುವ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಕಾರ್ಡ್‌ನ ಪ್ರತಿ ಸದಸ್ಯನಿಗೆ 7 ಕೆಜಿಯ ಪಡಿತರ ಬ್ಯಾಗ್‌ ಸಿದ್ಧಪಡಿಸಿ ನೀಡಲಾಗುವುದು. ಇದರಿಂದ ಮೋಸ ತಪ್ಪಿಸಬಹುದು. ಇದಕ್ಕೆ ಹೆಚ್ಚುವರಿಯಾಗಿ 10 ಕೋಟಿ ರೂ.ಬೇಕಾಗಿದೆ. ಪ್ರಸ್ತುತ
ಯೋಜನೆಗೆ 120 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಸಚಿವ ಖಾದರ್‌ ಹೇಳಿದರು.

Advertisement

ಬಿಪಿಎಲ್‌ ಕಾರ್ಡ್‌ಗಳನ್ನು ಇದೇ ಮೊದಲ ಬಾರಿಗೆ ಆಧಾರ್‌ ಕಾರ್ಡ್‌ ಮಾದರಿಯಲ್ಲಿ ಮುದ್ರಿಸಲಾಗುತ್ತಿದೆ. ಕೇಂದ್ರದ ಯುಪಿಎ ಸರ್ಕಾರ ಆಧಾರ್‌ ಕಾರ್ಡ್‌ ಮುದ್ರಣಕ್ಕೆ ಕರ್ನಾಟಕದ ಮಣಿಪಾಲ್‌ ಪ್ರಿಂಟಿಂಗ್‌ ಪ್ರಸ್‌ನ್ನು ಆಯ್ಕೆ ಮಾಡಿತ್ತು. ಡೇಟಾ ಗೌಪ್ಯತೆ, ಕಡಿಮೆ ದರದಲ್ಲಿ ಮುದ್ರಣ ಮತ್ತಿತರ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಕೂಡ ಮಣಿಪಾಲ್‌ ಪ್ರಸ್‌ಗೆ ಮುದ್ರಣಕ್ಕಾಗಿ ನೀಡಿದೆ. ಪ್ರತಿ ಬಿಪಿಎಲ್‌ ಕಾರ್ಡ್‌ ಮುದ್ರಣಕ್ಕೆ ಕೇವಲ 2 ರೂ. ವೆಚ್ಚ ಭರಿಸಲಾಗುತ್ತಿದೆ. ಆಧಾರ್‌ ಕಾರ್ಡ್‌ನ್ನು ಕೂಡ ಇದೇ ವೆಚ್ಚದಲ್ಲಿ ಮುದ್ರಿಸಲಾಗಿದೆ. ದಿನವೊಂದಕ್ಕೆ 1 ಲಕ್ಷ ಕಾರ್ಡ್‌ ಮುದ್ರಿಸುವ ಸಾಮರ್ಥ್ಯವನ್ನು ಮುದ್ರಣಾಲಯ ಹೊಂದಿದೆ. ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉದ್ಭವವಾಗದಂತೆ ನಕಲು ಮಾಡಲು ಸಾಧ್ಯವಿಲ್ಲದಂತೆ ಸಿದ್ಧಪಡಿಸಲಾಗಿದೆ. 
ಯು.ಟಿ.ಖಾದರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next