ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರದಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ನಗರದ 8 ವಿಭಾಗಗಳ ವ್ಯಾಪ್ತಿಯಲ್ಲಿರುವ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 16 ಸಾವಿರ ಪೊಲೀಸ್ ಅಧಿಕಾರಿ-ಸಿಬ್ಬಂದಿ ನಿಯೋಜಿಸಲಾಗಿದೆ.
ನಗರದ 28 ಕ್ಷೇತ್ರಗಳಲ್ಲಿ ನಗರದ ಒಟ್ಟು 7,916 ಮತಗಟ್ಟೆಗಳಿವೆ. 1,907 ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. 6,009 ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಿ ಅಗತ್ಯಕ್ಕೆ ತಕ್ಕಂತೆ ಬಂದೋಬಸ್ತ್ ಮಾಡಲಾಗಿದೆ. ಒಟ್ಟು ಮತಗಟ್ಟೆ ಕೇಂದ್ರಗಳು 2,509 ಇರಲಿದ್ದು, ಈ ಪೈಕಿ 397 ಸೆಕ್ಟರ್ ಮೊಬೈಲ…, 103 ಸೂಪರ್‌ವೈಸರಿ ಮೊಬೈಲ್ ಹಾಗೂ 26 ಸಬ್ ಡಿವಿಷನ್ ಮೊಬೈಲ್ ಕೇಂದ್ರಗಳನ್ನಾಗಿ ವಿಂಗಡಿಸಲಾಗಿದೆ.
ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತಾ ನಿರ್ವಹಣೆ ನಡೆಯಲಿದ್ದು, ಒಬ್ಬರು ವಿಶೇಷ ಆಯುಕ್ತರು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 24 ಡಿಸಿಪಿಗಳು, 67ಎಸಿಪಿಗಳು, 248 ಇನ್‌ಸ್ಪೆಕ್ಟರ್‌ಗಳು, 881 ಪಿಎಸ್‌ಐಗಳು, 1020 ಎಎಸ್‌ಐಗಳು, 9971 ಕಾನ್‌ಸ್ಟೆàಬಲ್ ಮತ್ತು ಹೆಡ್‌ಕಾನ್‌ಸ್ಟೇಬಲ್‌ಗಳು, 2565 ಗೃಹ ರಕ್ಷಕ ದಳ ಸಿಬ್ಬಂದಿ, 49 ಸಿಎಪಿಎಫ್ ಪಡೆಗಳು ಸೇರಿ 16 ಸಾವಿರ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
123 ಚೆಕ್‌ಪೋಸ್ಟ್: 8 ವಿಭಾಗಗಳಲ್ಲಿ 123 ಚೆಕ್ ಪೋಸ್ಟ್ ಹಾಕಲಾಗಿದೆ. 131 ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಜತೆಗೆ ಮೇ 8ರ ಸಂಜೆ 6 ರಿಂದ ಮೇ 10ರ ಮಧ್ಯರಾತ್ರಿವರೆಗೆ ಮದ್ಯಪಾನ ಮಾರಾಟ ನಿಧಿಷೇಸಲಾಗಿದೆ ಎಂದು ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ತಿಳಿಸಿದರು.
ಗೂಂಡಾ ಕಾಯ್ದೆಯಡಿ 28 ಮಂದಿ ಬಂಧನ: ನಗರದಲ್ಲಿರುವ 7,493 ರೌಡಿಗಳಿಗೆ ಎಚ್ಚರಿಕೆ ನೀಡುವುದರ ಜತೆಗೆ 28 ಜನರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿ ದೆ. ನಗರದ 460 ಕಡೆಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಗಿದ್ದು, 7,761 ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡು 4,818 ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ. ಇದುವರೆಗೂ ನಗರ ಪೊಲೀಸರು 10 ಕೋಟಿ ರೂ.ಗಳಿಗೂ ಹೆಚ್ಚು ನಗದು, 28.5ಕೆ.ಜಿಯಷ್ಟು ಚಿನ್ನಾಭರಣ, 140 ಕೆ.ಜಿ ಬೆಳ್ಳಿ ಆಭರಣಗಳು, 9 ಕೋಟಿಯಷ್ಟು ಉಚಿತ ಉಡುಗೊರೆಗಳು ಹಾಗೂ 29 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ಸೇರಿ 64 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.