Advertisement

ರೈತನ ಮಗಳ ಕೊರಳಿಗೆ 16 ಚಿನ್ನದ ಪದಕ

11:14 AM May 26, 2022 | Team Udayavani |

ಬಾಗಲಕೋಟೆ: ಆ ಯುವತಿ ಮೈತುಂಬ ಸೀರೆಯನ್ನುಟ್ಟು ಚಿಕ್ಕ ಹೆಜ್ಜೆಯನ್ನಿಡುತ್ತ ವೇದಿಕೆ ಹತ್ತುತ್ತಿದ್ದರೆ, ಇತ್ತ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ರೈತ ದಂಪತಿ ಕಣ್ಣಲ್ಲಿ ಆನಂದಭಾಷ್ಪ. ರಾಜ್ಯಪಾಲರಿಂದ ಒಂದೊಂದೇ ಚಿನ್ನದ ಪದಕ ಕೊರಳಿಗೆ ಹಾಕುತ್ತಿದ್ದರೆ ಸಭಾಂಗಣದಲ್ಲಿದ್ದ ಜನರಿಂದ ಭರ್ಜರಿ ಕರತಾಡನ.

Advertisement

ಇದು ಕಂಡು ಬಂದಿದ್ದು ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ. ಬಿಎಸ್ಸಿ ತೋಟಗಾರಿಕೆಯಲ್ಲಿ ಇಡೀ ವಿವಿಗೆ ಪ್ರಥಮ ಸ್ಥಾನ ಪಡೆದ ಆ ಯುವತಿ, ಬರೋಬ್ಬರಿ 16 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಳು. ಈ ಯುವತಿ ಸಾಧನೆಗೆ ಸ್ವತಃ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಬೆನ್ನು ತಟ್ಟಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಗುಲ್ಲಂಪೇಟೆ (ಕಾರೇಹಟ್ಟಿ, ಸತ್ತಿಹಳ್ಳಿ) ಗ್ರಾಮದ ಉಮ್ಮೆಸಾರಾ ಹಸ್ಮತ್‌ಅಲಿ ಎಂಬ ವಿದ್ಯಾರ್ಥಿನಿ ಶಿರಸಿ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ತೋಟಗಾರಿಕೆ ವಿಜ್ಞಾನ ಪದವಿ ಪಡೆದಿದ್ದು, ತೋಟಗಾರಿಕೆ ವಿವಿಯ 11ನೇ ಘಟಿಕೋತ್ಸವದಲ್ಲಿ ಒಟ್ಟು 16 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾರೆ.

ಬಿಎಸ್ಸಿ ತೋಟಗಾರಿಕೆ ವಿಜ್ಞಾನ ವಿಭಾಗದಲ್ಲಿ ಇಡೀ ವಿವಿಗೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ವಿವಿಯ ಚಿನ್ನದ ಪದಕ ಸಹಿತ ಈ ವಿಭಾಗದಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗಾಗಿ ವಿವಿಧ ದಾನಿಗಳು ಕೊಡಮಾಡಿದ ಒಟ್ಟು 15 ಚಿನ್ನದ ಪದಕ ಸಹಿತ 16 ಚಿನ್ನದ ಪದಕಗಳನ್ನು ವಿದ್ಯಾರ್ಥಿನಿ ಉಮ್ಮೆಸಾರಾ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ತೋಟಗಾರಿಕೆ ಸಚಿವ ವಿ. ಮುನಿರತ್ನ, ಕುಲಪತಿ ಡಾ| ಕೆ.ಎಂ. ಇಂದಿರೇಶ, ಮುಖ್ಯ ಭಾಷಣಕಾರರಾಗಿದ್ದ ರಾಜಸ್ಥಾನದ ಡಾ|ರಾಜೇಂದ್ರಸಿಂಗ್‌ ಪ್ರದಾನ ಮಾಡಿದರು.

ಸಾಲ ಮಾಡಿ ಶಿಕ್ಷಣ: ಉಮ್ಮೆಸಾರಾ ಅವರ ತಂದೆ ಹಸ್ಮತ್‌ ಅಲಿ, ಗುಲ್ಲಂಪೇಟದಲ್ಲಿ ರೈತರಾಗಿದ್ದು ನಾಲ್ಕು ಎಕರೆ ಕಾಫಿ ಹಾಗೂ ವಿವಿಧ ಕೃಷಿ ಮಾಡಿಕೊಂಡಿದ್ದಾರೆ. ತಾಯಿ ರಹೀಮಬಾನು ಗೃಹಿಣಿ. ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣದಲ್ಲೂ ಅತ್ಯಂತ ಜಾಣೆಯಾಗಿದ್ದ ಮಗಳ ಕಲಿಕಾ ಆಸಕ್ತಿ ಕಂಡ ತಂದೆ ಹಸ್ಮತ್‌ ಅಲಿ, ತೋಟಗಾರಿಕೆ ವಿಷಯದಲ್ಲಿ ಬಿಎಸ್ಸಿ ಕಲಿಯುವುದಾಗಿ ಹೇಳಿದಾಗ, ಪ್ರವೇಶ ಪರೀಕ್ಷೆ ಬರೆಯಲು ಸಹಕಾರ ನೀಡಿದರು.

Advertisement

ತೋಟಗಾರಿಕೆ ಶಿರಸಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿ ಉಮ್ಮೆಸಾರಾ ವಿವಿಯ ಶಿಷ್ಯವೇತನಕ್ಕೂ ಆಯ್ಕೆಯಾಗಿದ್ದರು. ಆದರೆ, ಬಿಎಸ್ಸಿ ತೋಟಗಾರಿಕೆ ವಿಜ್ಞಾನ ಪೂರ್ಣಗೊಳಿಸಲು, ಗುಲ್ಲಂಪೇಟದ ಕೆನರಾ ಬ್ಯಾಂಕ್‌ನಲ್ಲಿ ಒಟ್ಟು 1 ಲಕ್ಷ ಶೈಕ್ಷಣಿಕ ಸಾಲ ಮಾಡಿದ್ದು, ಇನ್ನೂ 89 ಸಾವಿರ ಸಾಲ ಬಾಕಿ ಇದೆ.

ಇಟಲಿ ಶಿಕ್ಷಣಕ್ಕೆ ಹಣದ ಕೊರತೆ:16 ಚಿನ್ನದ ಪದಕ ಕೊರಳಿಗೇರಿಸಿಕೊಂಡ ಈ ಚಿನ್ನದ ಹುಡುಗಿ ಉಮ್ಮೆಸಾರಾಗೆ ತೋಟಗಾರಿಕೆ ಎಂಎಸ್ಸಿ ಕಲಿತು, ಸುಸ್ಥಿರ ಕೃಷಿಯಲ್ಲಿ ಸಂಶೋಧಕಿಯಾಗಬೇಕೆಂಬ ದೊಡ್ಡ ಗುರಿ ಇದೆ. ಇಟಲಿಯ ಪಡುವಾ ವಿಶ್ವ ವಿದ್ಯಾಲಯ ನಡೆಸುವ ಆನ್‌ಲೈನ್‌ ಪ್ರವೇಶ ಪರೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ 87ನೇ ರ್‍ಯಾಂಕ್‌ ಕೂಡ ಪಡೆದಿದ್ದಾಳೆ. ಇಟಲಿ ವಿವಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದು, ಅಲ್ಲಿಗೆ ಹೋಗಿ ಎಂಎಸ್ಸಿ ಸುಸ್ಥಿರ ಕೃಷಿ ಅಧ್ಯಯನ ಮಾಡಲು ಸುಮಾರು 8ರಿಂದ 10 ಲಕ್ಷ ಹಣ ಬೇಕು. ಇದಕ್ಕಾಗಿ ಅದೇ ಕೆನರಾ ಬ್ಯಾಂಕ್‌ನಲ್ಲಿ ಶೈಕ್ಷಣಿಕ ಸಾಲ ಕೇಳಿದ್ದು ಅದು ರಿಜೆಕ್ಟ್ ಆಗಿದೆ. ನಾಲ್ಕು ಎಕರೆ ಹೊಲ ಒತ್ತೆ ಇಟ್ಟುಕೊಂಡು ಸಾಲ ಕೊಡಿ ಎಂದು ತಂದೆ ಹಸ್ಮತ್‌ ಅಲಿ ಕೇಳಿದ್ದು, ರೈತರಿಗೆ ಅಷ್ಟೊಂದು ಸಾಲ ಕೊಡಲು ಬರಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕೆಂಬ ಚಿಂತೆಯಲ್ಲಿ ಈ ವಿದ್ಯಾರ್ಥಿನಿಯ ಕುಟುಂಬವಿದೆ.

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next