Advertisement
ರಾಮ್‌ಬನ್ ಜಿಲ್ಲೆಯ ನಚ್ಲಾನಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಬಸ್ ಸ್ಕಿಡ್ ಆಗಿ ವಾಲಿದ್ದು, ಅನಂತರ ಕಮರಿಯೊಂದಕ್ಕೆ ಉರುಳಿಬಿದ್ದಿದೆ. ಈ ವೇಳೆ ಇಬ್ಬರು ಮಹಿಳೆಯರ ಸಹಿತ 16 ಮಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 19 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಸಂಭವಿಸಿದ ಕೂಡಲೇ ವಾಯುಪಡೆಯ ಹೆಲಿಕಾಪ್ಟರ್ ಮೂಲಕ 19 ಮಂದಿಯನ್ನು ಮೇಲೆತ್ತಲಾಗಿದೆ ಎಂದು ಹಿರಿಯ ಸುಪರಿಂಟೆಂಡೆಂಟ್ ಆಫ್ಪೊ ಲೀಸ್ ಮೋಹನ್ ಲಾಲ್ ತಿಳಿಸಿದ್ದಾರೆ. ಮೃತರು ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಅಸ್ಸಾಂ, ಹರಿಯಾಣ ಮತ್ತು ಮಧ್ಯಪ್ರದೇಶಕ್ಕೆ ಸೇರಿದವರು ಎಂದೂ ಅವರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಯಾತ್ರಿಗಳ ಸಾವು ಅತ್ಯಂತ ದುಃಖ ತಂದಿದೆ ಎಂದಿದ್ದಾರೆ. ಜತೆಗೆ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್.ಎನ್. ವೋಹ್ರಾ ಮತ್ತು ಸಿಎಂ ಮೆಹಬೂಬಾ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಬಗ್ಗೆ ವಿವರ ಪಡೆದಿದ್ದಾರೆ. ಉಗ್ರರ ದಾಳಿ: ಮೃತರ ಸಂಖ್ಯೆ 8ಕ್ಕೇರಿಕೆ
ಕಳೆದ ಸೋಮವಾರ ನಡೆದ ಉಗ್ರರ ದಾಳಿಯಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ರವಿವಾರ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಅಮರನಾಥ ಯಾತ್ರಿಗಳ ಮೇಲೆ ನಡೆದ ಉಗ್ರ ದಾಳಿಗೆ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. ಗಾಯಗೊಂಡಿದ್ದ ಗುಜರಾತ್‌ನ ಲಲಿತಾ ಬೆನ್(47) ಇಲ್ಲಿನ ಸ್ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಅಸುನೀಗಿದ್ದಾರೆ.