Advertisement

16.65 ಲಕ್ಷ ರೂ. ಮೌಲ್ಯದ ಗೃಹಬಳಕೆ ವಸ್ತು ವಶ

11:36 PM Mar 20, 2023 | Team Udayavani |

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎನ್ನಲಾಗಿರುವ 16.65 ಲಕ್ಷ ರೂ. ಮೌಲ್ಯದ ಗೃಹಬಳಕೆ ವಸ್ತುಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ.

Advertisement

ದಾವಣಗೆರೆಯ ಗಾಂಧಿ ನಗರ ಠಾಣೆ ಸರಹದ್ದಿನ ನಾಲಾಬಂದ್‌ ರಸ್ತೆಯಲ್ಲಿರುವ ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಲತೇಶ ಜಾಧವ್‌ ಎಂಬುವವರಿಗೆ ಸೇರಿದ ಶೆಡ್‌ನ‌ಲ್ಲಿ ಒಟ್ಟು 597 ಬಾಕ್ಸ್‌ ವಶಪಡಿಸಿಕೊಳ್ಳಲಾಗಿದೆ.

ಪ್ರತಿ ಬಾಕ್ಸ್‌ ಮೇಲೆ 2790 ರೂ. ಎಂದು ನಮೂದಿಸಲಾಗಿದೆ. ಎಲ್ಲ ಬಾಕ್ಸ್‌ಗಳ ಮೇಲೆ ಎಸ್‌ಎಸ್‌ ಮತ್ತು ಎಸ್‌ಎಸ್‌ಎಂ ಅಭಿಮಾನಿ ಬಳಗ, ಹಸ್ತದ ಗುರುತು ಇರುವ ಹಾಗೂ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಭಾವಚಿತ್ರ ಅಂಟಿಸಿರುವುದು ಕಂಡುಬಂದಿದೆ.

ಪತ್ತೆಯಾದ ಬಾಕ್ಸ್‌ಗಳಲ್ಲಿ ಗೃಹ ಬಳಕೆಗೆ ಸಂಬಂಧಿಸಿದ ನಾನ್‌ಸ್ಟಿಕ್‌ ಕೋಟಿಂಗ್‌ ಇರುವ ಕಡಾಯಿ, ಫ್ತೈಫ್ಯಾನ್‌, ಕ್ಯಾರೋಲ್‌, ವುಡ್‌ ಸ್ಟಿಕ್‌ ಕಂಡುಬಂದಿವೆ. ಮತದಾರರಿಗೆ ಹಂಚಲು ದಾಸ್ತಾನು ಮಾಡಿರುವ ಅನುಮಾನ ವ್ಯಕ್ತವಾಗಿದೆ. ಶೆಡ್‌ ಮಾಲೀಕ ಮಾಲತೇಶ ಜಾಧವ್‌ ವಿರುದ್ಧ ಕಲಂ 171(ಇ) ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಲಾಗಿದೆ.

ದಾವಣಗೆರೆ ದಕ್ಷಿಣ ವಿಭಾಗದ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಎಂ. ಮಾನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅನಿಲ್‌ಕುಮಾರ್‌, ಡಿ.ಶಿವಾನಂದ ಹಾಗೂ ಪೊಲೀಸರ ಸಮಕ್ಷಮದಲ್ಲಿ ಪಂಚನಾಮೆ ನಡೆಸಿ ದೂರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next